Home ಅಂಕಣಗಳು ಮಾಧ್ಯಮ ವಿರುಧ್ಧ ದಮನಕಾರಿ ನೀತಿಗೆ ಕೊನೆಯೆಂದು

ಮಾಧ್ಯಮ ವಿರುಧ್ಧ ದಮನಕಾರಿ ನೀತಿಗೆ ಕೊನೆಯೆಂದು

ಪ್ರಜಾಸತ್ತೆಯ ರಕ್ಷಕನಂತೆ ಕಾರ್ಯನಿರ್ವಹಿಸುವ ಕೆಲವು ಪ್ರಾಮಾಣಿಕ ಮಾಧ್ಯಮಗಳಿಗೆ ಅಧಿಕಾರಶಾಹಿಯು ರಕ್ಕಸವಾಗಿ ಮಾರ್ಪಡುತ್ತಿರುವ ಬೆಳವಣಿಗೆಗಳು ಇತ್ತೀಚೆಗೆ ತೀವ್ರತೆಯನ್ನು ಪಡೆಯುತ್ತಿವೆ. ಅದು ಎಷ್ಟರ ಮಟ್ಟಿಗೆ ಹೆಮ್ಮರವಾಗುತ್ತಿದೆಯೆಂದರೆ ಪುರಾವೆ ಸಹಿತ ಮಾಡಿದ ವರದಿಗಳ ವಿರುಧ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಷ್ಟರ ಮಟ್ಟಿಗೆ ಇದು ತೀವೃತೆಯನ್ನು ಪಡೆದುಕೊಳ್ಳುತ್ತಿದೆ. ಆ ಮೂಲಕ ಪರೋಕ್ಷವಾಗಿ ಜನತೆಗೆ ಸತ್ಯವನ್ನು ಬೆಂಬಲಿಸಲೇಬಾರದು ಎನ್ನುವ ಸಂದೇಶವನ್ನು ಅಧಿಕಾರ ವರ್ಗ ನೀಡುತ್ತಿದೆ.

ನಿನ್ನೆ ನಡೆದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಭಾಗಿಯಾಗಿದ್ದಾನೆನ್ನಲಾದ ಭ್ರಷ್ಟಾಚಾರದ ಕರ್ಮಕಾಂಡವನ್ನು ಪುರಾವೆ ಸಹಿತ ವರದಿ ಮಾಡಿದ ಪವರ್ ಟಿವಿ ಚಾನೆಲನ್ನು ರಾತ್ರೋರಾತ್ರಿ ಸರ್ಕಾರವು ಬ್ಯಾನ್ ಮಾಡಿದೆ. ಖಾಸಗಿ ಚಾನೆಲೊಂದು ಮಾಡಿದ ವರದಿಯ ಕುರಿತು ನಿಜಾಂಶವನ್ನು ತನಿಖೆಗೆ ಒಳಪಡಿಸಬೇಕಾಗಿದ್ದ ಸರ್ಕಾರ ಚಾನೆಲಿನ ಹಕ್ಕನ್ನೇ ರದ್ದುಗೊಳಿಸಿ ಅದರ ಉದ್ಯೋಗಿಗಳು ಬೀದಿಗೆ ಬರುವಂತೆ ಮಾಡಿದೆ. ಆ ಮೂಲಕ ತನ್ನ ಆಪ್ತರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಂತಿರುವ ಸರ್ಕಾರದ ನಿಲುವು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಈಗ ಆರೋಪ ಮಾಡಿದವರು ಅದು ಯಾವ ಕಾರಣಕ್ಕಾಗಿ ಮಾಡಿದ್ದಾರೆ ಅನ್ನುವುದು ಪಕ್ಕಕ್ಕಿರಲಿ. ಆದರೆ ಮಾಡಿದ ಆರೋಪವೊಂದು ಸರ್ಕಾರಕ್ಕಾಗಲೀ ಅಥವಾ ಇನ್ನಿತರ ಸಂಸ್ಥೆಗಾಗಲಿ ವಿಶ್ವಾಸಾರ್ಹತೆಯ ಕುರಿತು ಸಂಶಯ ಮೂಡಿವಂತಾಗಿ ಅದು ಸಾರ್ವಜನಿಕ ವಲಯದಲ್ಲಿ ನಂಬಿಕೆ ಕಳೆದುಕೊಳ್ಳದಂತೆ ಮಾಡಲು ಸರ್ಕಾರ ಯಾ ಸಂಸ್ಥೆಗಳು ಆದ್ಯತೆಯನ್ನು ನೀಡುತ್ತಲೇ ಇಲ್ಲ ಅನ್ನುವುದು ಸ್ಪಷ್ಟವಾಗುತ್ತಿದೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

ಕೆಲವು ದಿನಗಳ‌ ಮೊದಲು ಸುಪ್ರೀಂ ಕೋರ್ಟ್‌ನ ಬಗ್ಗೆ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಆಪಾದನೆಗಳಿಗೆ ವಿರುಧ್ಧವಾಗಿಯೇ ಕೋರ್ಟು ನಡೆದುಕೊಂಡಿದ್ದು ಇತ್ತೀಚಿನ ಉದಾಹರಣೆಗಳಲ್ಲೊಂದು. ಅದು ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವ ಬದಲು ಆರೋಪಿಸಿದ ವ್ಯಕ್ತಿಯನ್ನೇ ಗುರಿ ಮಾಡಿತ್ತು. ಸಿಬಿಐ ಮುಖ್ಯಸ್ಥರನ್ನು ನೇಮಿಸುವ ಪ್ರಕ್ರಿಯೆಯಲ್ಲೂ ಗೊಂದಲವಾಯಿತು. ಅಲ್ಲದೇ ಸಾರ್ವಜನಿಕ ವಲಯದಲ್ಲೂ ಚರ್ಚೆಯಾಗುವಂತೆ ಅದರ ಮುಖ್ಯಸ್ಥರನ್ನ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರ್ಕಾರವು ಅತಿಪ್ರಧಾನ ಸಂಸ್ಥೆಯ ಬಗ್ಗೆ ಸಂಶಯಿಸುವಂತೆ ಮಾಡಿತ್ತು.

ಸತ್ಯಾಸತ್ಯತೆಯನ್ನು ವರದಿ ಮಾಡುವ ಟಿವಿ ಚಾನೆಲ್‌ಗಳ ವಿರುಧ್ಧವಾಗಿ ಸರ್ಕಾರಗಳು ದಾಳಿ ನಡೆಸುತ್ತಿರುವುದು ಇದು ಮೊದಲೇನಲ್ಲ. ನವದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಮುಸ್ಲಿಮರ ಮೇಲೆ ನಡೆಯುತ್ತಿದ್ದ ಭೀಕರ ಕೋಮುಗಲಭೆಯನ್ನು ಪ್ರಸಾರ ಮಾಡಬಹುದು ಎನ್ನುವ ಕಾರಣದಿಂದ ಕೇಂದ್ರವು ಏಕಾಏಕಿ ಮೀಡಿಯಾ ಒನ್ ಚಾನೆಲನ್ನು 48 ಗಂಟೆಗಳ‌ ಕಾಲ ಸ್ಥಗಿತಗೊಳಿಸಿತ್ತು. ಅಂದು ಮೀಡಿಯಾ ವನ್ ಚಾನೆಲಿನ ಅಪ್‌ಲಿಂಕ್ ಇದ್ದಕ್ಕಿದ್ದಂತೆ ಸಂಪರ್ಕವನ್ನು ಕಡಿದುಕೊಂಡಿತ್ತು. ವರದಿ ಮಾಡುತ್ತಿದ್ದ ನಿರೂಪಕ ಕುನ್ಹಿರಾಮನ್ ಅವರ ಚಿತ್ರವು ಇದ್ದಕ್ಕಿದ್ದಂತೆ ಪರದೆಯಿಂದ ಮರೆಯಾಗಿತ್ತು.ಆದರೆ ಇದು ತಾಂತ್ರಿಕ ತೊಂದರೆಯಾಗಿರಲಿಲ್ಲ. ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶದಿಂದ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಫೆಬ್ರವರಿಯ ಅತಿದೊಡ್ಡ ಸುದ್ದಿಯನ್ನು ಪ್ರಸಾರ ಮಾಡಬಾರದು ಎನ್ನುವ ಕಾರಣಕ್ಕಾಗಿ 48 ಗಂಟೆಗಳ ಕಾಲ ನಿರ್ಬಂಧಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿತ್ತು.

ಕೇಂದ್ರ ಸರ್ಕಾರವು ಅಂತಹ ನಿರ್ಧಾರವನ್ನು ತೆಗೆದುಕೊಂಡಿರುವುದು ಆಘಾತಕಾರಿ” ಎಂದು ಮೀಡಿಯಾ ಒನ್‌ನ ಸಂಪಾದಕ ಆರ್. ಸುಭಾಷ್ ಹೇಳಿದ್ದರು. ಯಾಕೆಂದರೆ ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿತ್ತು. 1947 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದಾಗಿನಿಂದ ಈ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಭಾರತದ ಪತ್ರಿಕಾ ವಲಯವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆದರೆ ಅದರೊಂದಿಗೆ ಇಲ್ಲಿ ಪತ್ರಕರ್ತರು ಸಹ ಈಗ ಆಕ್ರಮಣಕ್ಕೆ ಒಳಗಾಗಿದ್ದಾರೆ ಮತ್ತು ಒಳಗಾಗುತ್ತಿದ್ದಾರೆ.

ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ಅವರ ಸರ್ಕಾರವು ದೇಶದ ಸುದ್ದಿ ಮಾಧ್ಯಮಗಳನ್ನು, ಅದರಲ್ಲೂ ವಿಶೇಷವಾಗಿ ಏರ್ ವೇವ್ಸ್ (ರೇಡಿಯೋ) ಅನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಎಲ್ಲಾ ಪ್ರಧಾನಿಗಳಂತೆ ಮಾಧ್ಯ ವರ್ಗವು ತಮ್ಮ ಮೂಗಿನ ನೇರಕ್ಕಿದ್ದರೆ ಮಾತ್ರ ಅಧಿಕಾರ ಉಳಿಯಬಹುದೆಂದು ಅವರು ನಂಬಿದ್ದಾರೆ. ಅದರ ಫಲವೆಂಬಂತೆ ಮೋದಿಯವರು ರಾಷ್ಟ್ರದ ನಿಸ್ವಾರ್ಥ ರಕ್ಷಕ ಎಂದು ಬಿಂಬಿಸುವ ವ್ಯಕ್ತಿಯಾರಾಧನೆಯನ್ನು ನಿರ್ಮಿಸಲು ಚಾಣಾಕ್ಷವಾಗಿ ಮಾಧ್ಯಮವನ್ನು ಅವರು ಬೆಳೆಸಿದ್ದಾರೆ.

ಒಂದು ರೀತಿಯಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ಮಾಧ್ಯಮಗಳನ್ನು ತನ್ನ ನೇರಕ್ಕೆ ನಿಲ್ಲಿಸುತ್ತಿದ್ದ ರೀತಿಯು ಈಗಿನ ಭಾರತದ ಪರಿಸ್ಥಿತಿಗೆ ಭಿನ್ನವೇನಾಗಿರಲಿಲ್ಲ. ಅವನು ಮತ್ತು ಅವನ ನಾಜಿ ಪಡೆಯು 1933ರಲ್ಲಿ ಜರ್ಮನಿಯಲ್ಲಿ ಅಧಿಕಾರಕ್ಕೆ ಏರಿದ್ದು ಈ ಒಂದು ಮಾಂತ್ರಿಕ ಮಾಧ್ಯಮದ ಸಹಾಯದಿಂದಲೇ ಆಗಿತ್ತು. ಅವರು ಮೊದಲು ಮಾಡಿದ ಕೆಲಸವೇನೆಂದರೆ ಅಡಾಲ್ಫ್ ಹಿಟ್ಲರನ ಭವ್ಯವಾದ ಕಲ್ಪನೆಗಳನ್ನು ಟೀಕಿಸುವ ಉಳಿದ ಯಾವುದೇ ಪತ್ರಿಕಾ ಬಳಗದವರನ್ನು ಅವರು ಇನ್ನಿಲ್ಲದಂತೆ ಮಾಡಿದ್ದರು. ಮತ್ತು ಹಿಟ್ಲರನ ಆಲೋಚನೆಗಳಲ್ಲಿ ತೃಪ್ತಿದಾಯಕ ಅಭಿಪ್ರಾಯ ಮೂಡುವಂತೆ ಮಾಡಲು ಅವನು ಮಾಧ್ಯಮಗಳನ್ನು ಬಳಸಿಕೊಂಡಿದ್ದ. ಅದಕ್ಕಾಗಿಯೇ ಹಲವಾರು ಕಾನೂನುಗಳನ್ನು ಸಹ ಹಿಟ್ಲರ್ ಜಾರಿಗೆ ತಂದಿದ್ದ.

ಇಟಲಿಯಲ್ಲಿಯೂ ಸಹ ಮುಸೊಲಿನಿ 1922 ರಲ್ಲಿ ಪ್ರಧಾನಿಯಾದ ತಕ್ಷಣವೇ ಆತ ಎಲ್ಲಾ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಿತ್ತುಹಾಕಿದ್ದ. ಮುಂದುವರೆದು ಜನರ ಆಲೋಚನಗಳನ್ನೇ ಮರುರೂಪಿಸುವ ಕೆಲಸಕ್ಕೆ ಆತ ಕೈ ಹಾಕಿದ್ದ. ಅದಕ್ಕಾಗಿ ಮಾಹಿತಿ ಪ್ರಸರಣದ ಎಲ್ಲಾ ಅಂಶಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಅವನು ತಂದಿದ್ದ.

ಈ ಎಲ್ಲಾ ಇತಿಹಾಸವನ್ನು ಕೆದಕುತ್ತಲೇ ಹೋದಂತೆ ಮಾಧ್ಯಮಗಳೇ ಜಗತ್ತಿನ ಒಳಿತು ಮತ್ತು ಕೆಡುಕಿನ ಹಾದಿಯಲ್ಲಿ ಅತಿಪ್ರಧಾನ ಮಾರ್ಗದರ್ಶಕನಾಗಿ ಗೋಚರವಾಗುತ್ತದೆ. ಆದರೆ ಅತ್ಯಂತ ಭಯಾನಕವಾದ ಸಂಗತಿಯೇನೆಂದರೆ ಇಂದು ಮಾಧ್ಯಮಗಳ ವ್ಯಾಪ್ತಿಯು ಅಂದಿನಂತಲ್ಲ. ರೇಡಿಯೋ ಅಥವಾ ಟಿವಿಗೆ ಮಾತ್ರವೇ ಸೀಮಿತವಾಗಿದ್ದ ಅಂದಿನ ಮಾಧ್ಯಮಗಳ ಕರಾಮತ್ತು ಆ ಮಟ್ಟಕ್ಕಿದ್ದರೆ, ಇಂದು ಬೆರಳ ತುದಿಯಲ್ಲಿರುವ ಸಾವಿರ ಸಾವಿರ ಸುದ್ದಿ ವಾಹಿನಿಗಳು ಅದೆಷ್ಟು ಪರಿಣಾಮಕಾರಿ ಅನ್ನುವುದನ್ನು ಊಹಿಸಬಹುದು. ಕೆಡುಕಿನ ಮತ್ತು ವ್ಯಕ್ತಿಪೂಜೆಯ ಉತ್ತುಂಗಕ್ಕೆ ಏರಿದ ಮಾಧ್ಯಮಗಳ ನಡುವೆ ಕೆಲವೇ ಕೆಲವು ಮಾಧ್ಯಮಗಳ ಪ್ರಾಮಾಣಿಕತೆಯಿಂದ ಮಾತ್ರವೇ ಇಂದು ಪ್ರಜಾಸತ್ತೆಯು ಉಸಿರಾಡುತ್ತಿದೆ ಅನ್ನಬಹುದು. ಸಂವಿಧಾನದ 370 ವಿಧಿಗೆ ತಿದ್ದುಪಡಿ ತಂದು ವ್ಯಾಪ್ತಿರಹಿತ ತಡೆಯನ್ನು ನೀಡಿದ ಜಮ್ಮು ಕಾಶ್ಮೀರದ ಜೀವನಸ್ಥಿತಿ ಏನಾಗಿದೆ ಅನ್ನುವುದೇ ಇಂದಿಗೂ ನಿಗೂಢ. ಅಲ್ಲಿನ ಜನರ ನರಕಯಾತನೆ, ಬವಣೆಗಳ ಯಾವುದೇ ಸುದ್ದಿಗಳು ನಮಗೆ ತಲುಪುತ್ತಿಲ್ಲ.

ಅದೊಂದು ಭಾರತದ ಭೂಭಾಗವಾಗಿಯಷ್ಟೇ ಉಳಿದಿದೆ ಹೊರತು ಅಲ್ಲಿನ ಜನಜೀವನದ ಪರಿಸ್ಥಿತಿಯನ್ನು ಭಾರತದ ಆಡಳಿತ ಜಾಣ್ಮೆಯಿಂದ ಮರೆಮಾಚಿದೆ. ಯಾವುದೇ ಮಾಧ್ಯಮಗಳೂ ಸಹ ಅಲ್ಲಿನ ನೈಜ ಸಂಗತಿಯನ್ನು ಜಗತ್ತಿಗೆ ಪ್ರಚುರಪಡಿಸದಂತೆ ನಿರ್ಬಂಧಿಸಿ ಅಲ್ಲಿನ ಸತ್ಯವನ್ನು ಸರ್ಕಾರ ಕಗ್ಗತ್ತಲಲ್ಲಿಟ್ಟಿದೆ. ನಾವು ದೊಡ್ಡ ಕಥೆಗೆ ನ್ಯಾಯ ಒದಗಿಸಲಿಲ್ಲ, ಎಂದು ದೇಶದ ಪ್ರಮುಖ ಸುದ್ದಿ ನಿರೂಪಕರಲ್ಲಿ ಒಬ್ಬರಾದ ರಾಜ್‌ದೀಪ್ ಸರ್ದೇಸಾಯಿ ಹೇಳಿದ್ದರು. ನಾವು ಅಲ್ಲಿನ ಪರಿಸ್ಥಿತಿಯನ್ನು ಆಕ್ರಮಣಕಾರಿಯಾಗಿ ಮತ್ತು ಸ್ವತಂತ್ರವಾಗಿ ವರದಿ ಮಾಡಬೇಕಾಗಿತ್ತು ಎಂದೂ ಸಹ ಅವರು ಹೇಳಿದ್ದರು. ಯಾವುದೇ ಒಂದು ಮಾನವಹಕ್ಕುಗಳ‌ ವಿಷಯಕ್ಕೆ ಸಂಬಂಧಿಸಿದ ವರದಿಗಳ ಪ್ರಸಾರಕ್ಕೆ ಭಾರತದ ಅಧಿಕಾರವರ್ಗವು ಮುಕ್ತವಾದ ಸ್ವಾತಂತ್ರ್ಯವನ್ನು ನಿಷೇಧಿಸುತ್ತಲೇ ಬರುತ್ತಿದೆ. ಭದ್ರತಾ ದೃಷ್ಟಿಯಿಂದ ವರದಿಗಾರರಿಗೆ ನಿರ್ಬಂಧ ಅನ್ನುವ ಗುಬ್ಬಿ ಕಥೆಯನ್ನು ನಿಷೇಧದ ಮರೆಯ ಹಿಂದೆ ಸರ್ಕಾರಗಳು ಹೇಳುತ್ತಿವೆ.

ಕತ್ತಿಯಂಚಿನಲ್ಲಿ ನಡೆಯುತ್ತಿರುವ ಬೆರಳೆಣಿಕೆಯ ಮಾಧ್ಯಮಗಳೇ ಭಾರತದ ಉಸಿರು ಅನ್ನುವುದನ್ನು ನಾವು ಮರೆಯುವಂತಿಲ್ಲ. ಬಹುಪಾಲು ಮಾಧ್ಯಮಗಳು ಅಧಿಕಾರ ವರ್ಗದ ಬೂಟಿನಡಿಯ ಸೇವಕರಾಗಿಯೇ ಸೇವೆ ಸಲ್ಲಿಸುತ್ತಿರುವಾಗ ಪವರ್ ಟಿವಿಯಂತೆ ಪ್ರಜಾಸತ್ತೆಯ ಕಾವಲುಗಾರನಾಗುವ ಮಾಧ್ಯಮಗಳಿಗೆ ನಮ್ಮ ಬೆಂಬಲವಿರಲೇಬೇಕು. ಅದರ ಪ್ರಿನ್ಸಿಪಲ್ ಎಡಿಟರ್ ಆಗಿರುವ ರೆಹಮಾನ್ ತನ್ನ ಫೇಸ್‌ಬುಕ್ ಲೈವ್ ನಲ್ಲಿ ಹೇಳಿದಂತೆ “ನಮ್ಮ ಧ್ವನಿಯನ್ನು ತುಳಿದಷ್ಟು ನಾವು ನಿಜವನ್ನು ಹೇಳುವ ನಮ್ಮ ಕಾಯಕದಿಂದ ಹಿಂದೆ ಸರಿಯಲಾರೆವು. ನಮ್ಮನ್ನು ಬ್ಲಾಕ್ ಮಾಡಿದಂತೆ ನಾವು ಕ್ರಿಯೆಟ್ ಮಾಡುತ್ತಲೇ ಇರುತ್ತೇವೆ ಅನ್ನುವ ಅವರ ಮಾತಿಗೆ ನಮ್ಮ ದನಿಯು ಸೇರಿದರೆ ಮಾತ್ರ ಭಾರತವನ್ನು ಉಳಿಸಬಹುದು. ಆ ಮೂಲಕವೇ ಪ್ರಜಾಸತ್ತೆಯು ಉಸಿರಾಡಬಲ್ಲದು.

Previous articleಕ್ಷಮೆಯಿರಲಿ ಬಾಪು …..ಈ ದಿನ ನಿಮ್ಮ ನೆನಪಿಗಾಗಿಯಷ್ಟೇ ನಿಮ್ಮ ಮೌಲ್ಯಕ್ಕಾಗಿಯಲ್ಲ….
Next articleಪ್ರವಾದಿﷺ ಜೀವನ ಸಂದೇಶ

LEAVE A REPLY

Please enter your comment!
Please enter your name here