“ನಂಬಿಕೆಗಳು ತುಂಬಿ ಧರ್ಮ ಬರಡಾದ ದೇಶವನು
ನನ್ನ ಗೆಳೆಯರೆ ಹಾಗೂ ಸಹ ಪಯಣಿಗರೆ
ಮರುಕದಿ ನೋಡಿ”
ಖಲೀಲ್ ಗಿಬ್ರಾನ್ ರವರ ಈ ಪದ್ಯದ ಸಾಲುಗಳ ಆಶಯ ಸಾಮರಸ್ಯದ ಮಹತ್ವವನ್ನು ಒತ್ತಿ ಒತ್ತಿ ಹೇಳುತ್ತಿದೆ.
ಸಾಮರಸ್ಯ ಎಂದರೇನು? ಅರ್ಥಕೋಶದಲ್ಲಿ ಹೊಂದಾಣಿಕೆ, ಸಹೋದರತೆ, ಸಮರಸ, ಹಿತ, ಸಾಂಗತ್ಯ, ಐಕ್ಯಮತ, ಸಹಬಾಳ್ವೆ, ಸಮಾನತೆ ಎಂದಿದೆ.
ಎಲ್ಲವನ್ನು ಎಲ್ಲರಿಗೂ ಹಂಚುವುದು ಅಥವಾ ಎಲ್ಲರನ್ನೂ ಸಮಾನವಾಗಿ ನೋಡುವುದು ಅಥವಾ ಎಲ್ಲ ಧರ್ಮಗಳನ್ನು ಸಮಾನ ಅಂತರದಲ್ಲಿಟ್ಟು ನೋಡುವುದು ಸಮಾನತೆಯಾಗುತ್ತದೆ. ಸಮಾನತೆ ಎನ್ನುವುದು ಸಾಮರಸ್ಯ ಸಾಧಿಸದೆ ಸಾಧ್ಯವಾಗದು……..
ಭಾರತದ ಸುವರ್ಣ ಸ್ವಾತಂತ್ರ್ಯ ಕಳೆದು ಇನ್ನೇನು ಸ್ವತಂತ್ರದ ಅಮೃತ ಮಹೋತ್ಸವವನ್ನು ಕೂಡ ನಾವು ಆಚರಿಸಿದ್ದೇವೆ. ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಹೇಗೆ ಭದ್ರ ಗೊಳಿಸಬಹುದು ಎನ್ನುವುದನ್ನು ಸಕಾಲಿಕವಾಗಿ ಚರ್ಚಿಸ ಬೇಕಾದಂತಹ ಸಂಗತಿ ಕೂಡ ಹೌದು. ಪ್ರಸಕ್ತ ಸನ್ನಿವೇಶದಲ್ಲಿ ಭಾರತದ ಸ್ವತಂತ್ರದ ಸಾಧನೆ ಎರಡು ವಿಭಾಗ ವಾಗಿರುವುದನ್ನು ಗುರುತಿಸಬಹುದು.ದಿನೇ ದಿನೇ ಹೆಚ್ಚುತ್ತಿರುವ ಶ್ರೀಮಂತರ ಸಂಖ್ಯೆ. ನೆಲದ ಆಸ್ತಿಯು ಕೇವಲ 250 ಜನಕ್ಕೆಮಾತ್ರ ಹಂಚಿಕೆಯಾಗಿ ಹೊಳೆಯುವ ಭಾರತ ಮತ್ತು ದಿನದ ಆದಾಯ 20 ರೂ ಗೂ ಕಡಿಮೆ ಆಳದಲ್ಲಿ ಇಳಿದು ಬಡಜನತೆಯ ಬದುಕನ್ನು ಮೂರಾಬಟ್ಟೆ ಯಾಗಿಸಿ ನರಳುತ್ತಿರುವ ಭಾರತ ಇಂತಹ ಬೃಹತ್ ಆರ್ಥಿಕ ಕಂದಕದ ನಡುವೆ ಸಾಮರಸ್ಯ ಹೇಗೆ ಉಳಿದಿತ್ತು…….? ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿಗಾಗಿ ಲಕ್ಷ ಸಾವಿರ ಎಕರೆಯಷ್ಟು ಜಮೀನನ್ನು ತಮ್ಮ ಸ್ವಾರ್ಥಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬುವುದು ಒಂದು ಕಡೆಯಾದ್ರೆ ಅರಣ್ಯಗಳಿಗೆ ಬೆಟ್ಟಗುಡ್ಡಗಳಲ್ಲಿ ಒಕ್ಕಲೆಬ್ಬಿಸಿ ಬೇಲಿ ಹಾಕಿಕೊಂಡಿದ್ದಾರೆ. ಇದರ ನಡುವೆ ಬಡವರ ಪ್ರಮಾಣ ಏರಿಕೆಯಾಗಿದೆ ಇದರ ನಡುವೆ ನಮ್ಮಲ್ಲಿ ಹೇಗೆ ಸಾಮಾಜಿಕ ಸಾಮರಸ್ಯ ಕಟ್ಟುವುದು….?
ಭಾರತ ಜಗತ್ತಿನ ಏಕಮಾತ್ರ ಸಾಂಸ್ಕೃತಿಕ ವೈವಿಧ್ಯತೆಯನ್ನು ತುಂಬಿಕೊಂಡಿರುವ ನೆಲ. ಲಕ್ಷಾಂತರ ಜಾತಿ ಸಾವಿರಾರು ಭಾಷೆ ಧರ್ಮಗಳ ಚಿಂತನೆಗಳ ನಂದನವನ. ಸರ್ವಧರ್ಮಗಳು ಸಮನ್ವಯದಿಂದ ಉದಯಿಸಿದ ದೇಶವಿದು. ರಾಮ ರಹೀಮರ ಪ್ರಾರ್ಥನೆಗಳು ಏಕ ಸ್ವರದಲ್ಲಿ ಮೊಲಗುತ್ತದೆ. ಕಾಳಿದಾಸನ ಕಾವ್ಯ ಅಲ್ಲಮಾ ಇಕ್ಬಾಲರ ಶಾಯರಿ ಪ್ರತಿ ಧ್ವನಿಸುತ್ತದೆ. ಜಾತ್ಯಾತೀತತೆ ಮತ್ತು ಧರ್ಮ ನಿರಪೇಕ್ಷತೆ ಒಂದೇ ನೆಲದಲ್ಲಿ ಬದುಕಲು ಸಾಧ್ಯ. ಇದು ಗಾಂಧಿ ಹುಟ್ಟಿದ ನಾಡು ಟಿಪ್ಪುಸುಲ್ತಾನ್ ರಂತಹ ವೀರ ಯೋಧರು ಮಡಿದ ಬೀಡು.ಇಲ್ಲಿ ಸಾಮರಸ್ಯ ಉಳಿಬೇಕು ಸೌಹಾರ್ದತೆ ಬೆಳೆಯಬೇಕು…… ಜಗತ್ತಿನ ಅತಿಸುಂದರ ವಿವಿಧ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳನ್ನು ಪೋಷಿಸಿ ವಿಕಾಸವಾದ ನಂದನವನ ಈ ನಮ್ಮ ಭಾರತ.ಈ ದೇಶದಲ್ಲಿ ಕಂದಾಚಾರವನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಲೇ ಬೇಕೆಂದಿಲ್ಲ ಯಾವುದೇ ಧರ್ಮವಾಗಲಿ ಧರ್ಮ ಸಂಸ್ಥಾಪಕರಾಗಲಿ ರಾಷ್ಟ್ರಪಿತನೇ ಆಗಿರಲಿ ಎಷ್ಟೇ ದೊಡ್ಡ ವಿಧ್ವಾಂಸರೇ ಆಗಿರಲಿ ಎಲ್ಲರಿಗೂ ಸಮಾನವಾದ ಸ್ಥಾನವನ್ನು ಕಲ್ಪಿಸಿದೆ ಈ ಭಾರತ ದೇಶ.ಸಾಮರಸ್ಯದ ಪರಂಪರೆಯನ್ನೂ ಉಳಿಸಿಕೊಂಡು ಬಂದಿದೇ….
ಭಾರತದ ಸಂವಿಧಾನದ ಆಶಯ ಸರ್ವರಿಗೂ ಶಿಕ್ಷಣ, ಸರ್ವರಿಗೂ ಆರೋಗ್ಯ, ಸರ್ವರಿಗೂ ವಸತಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಎರಡೂವರೇ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಬಹುಸಂಖ್ಯಾತ ಜನರು ಬಡತನ ಮತ್ತು ನಿರುದ್ಯೋಗದಿಂದ ಬದುಕುತ್ತಿದ್ದಾರೆ. ಜಾತಿ ತಾರತಮ್ಯ ಇಮ್ಮಡಿಯಾಗಿ ಬೆಳೆದಿದೆ ಇದು ಈ ವ್ಯವಸ್ಥೆಯ ಭಾಗವಾಗಿದ್ದರೆ ಅಂತಹ ವ್ಯವಸ್ಥೆ ಸಾಮರಸ್ಯದಿಂದ ಕೂಡಿರಲು ಸಾಧ್ಯವಿಲ್ಲ…….
ಆದುದರಿಂದ ಶಿಕ್ಷಣದಲ್ಲಿ ಆಂತರಿಕ ಮೌಲ್ಯ ಅಗತ್ಯ ಆಧುನಿಕ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮದಲ್ಲಿ ಆಂತರಿಕ ಮೌಲ್ಯವನ್ನು ಸೇರಿಸುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಮಕ್ಕಳ ಬೌದ್ಧಿಕ ಹಾಗೂ ಬೌತಿಕ ಅಭಿವೃದ್ಧಿಗೆ ಅಗತ್ಯವಿರುವ ಪಠ್ಯಕ್ರಮ ರೂಪಿಸಬೇಕು. ಮಕ್ಕಳಲ್ಲಿ ಸ್ವಾತಂತ್ರ್ಯ ವೀರರು ಹಾಗೂ ಪೂರ್ವಜರ ಸೌಹಾರ್ಧತೆ ಸಮಾನತೆಯ ಇತಿಹಾಸ ಚರಿತ್ರೆಯನ್ನು ತಿಳಿಸಿ ಕೊಡುವುದರ ಮುಖಾಂತರ ಅವರಲ್ಲಿ ಸಾಮರಸ್ಯದ ಬೀಜವನ್ನು ಬಿತ್ತಬೇಕು.ಸ್ವಯಂ ಪ್ರತಿಷ್ಠೆಯಿಂದ ನಾವು ದೂರವಾಗಬೇಕು ಸ್ವಯಂ ಪ್ರತಿಷ್ಠೆಗೆ ಒಳಗಾದ ವ್ಯಕ್ತಿ ಒಬ್ಬಂಟಿ ಯಾಗುತ್ತಾನೆ. ಹುಟ್ಟು ಸಾವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಹೀಗಾಗಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಶಾಂತಿ ಸೌಹಾರ್ದತೆ ಮತ್ತು ನೆಮ್ಮದಿಯಿಂದ ಕೂಡಿ ಬಾಳಬೇಕು ಆದರೆ ಕೆಲವು ಭಾಗದಲ್ಲಿ ಹಿಂಸೆಯಿಂದ ಜನ ಸಾಯುತ್ತಿದ್ದಾರೆ. ಜಾಗತಿಕ ತಾಪಮಾನ ಮತ್ತು ಆರ್ಥಿಕತೆ ಪ್ರತಿಯೊಬ್ಬರ ಭವಿಷ್ಯದ ಮೇಲೂ ಪ್ರಭಾವವನ್ನು ಬೀರಿದೆ.ವಿಶ್ವದ ಸಮಾನತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಏಕತೆ ಸಾಮಾಜಿಕ ಜವಾಬ್ದಾರಿ ಮತ್ತು ಧಾರ್ಮಿಕ ಸೌಹಾರ್ದತೆ ಅತ್ಯಾವಶ್ಯಕ ಸಂತ ನಾರಾಯಣ ಗುರು ಸಾರಿ ಹೇಳಿದ ಸತ್ಯ ಕೂಡ “ಹತ್ತಾರು ಧರ್ಮ ನೂರಾರು ದೇವರುಗಳನ್ನು ನೂಕಾಚೆ ದೂರ ಶಾಂತಿ ಪ್ರೀತಿಯ ಉಡಿ ತುಂಬಿಕೊಳ್ಳಲು ಮಾನವತೆ ಯೊಂದಿದ್ದರೆ” ಸಾಕು ಎಂದು ಭಾರತದ ಸ್ವಾತಂತ್ರ್ಯ ಶ್ರೀಮಂತರ ಬಂಡವಾಳಿಗಳ ಗುಲಾಮಿ ತನವನ್ನು ಅಪ್ಪಿಕೊಂಡಿದೆ. ಕೋಮುವಾದ-ಜಾತಿವಾದ ದಲಿತರ ದಮನದಿಂದ ಕಳಂಕ ಗೊಂಡಿದೆ. ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು, ಅಂಟಿಕೊಂಡ ಪಾಪದಿಂದ ಹೊರತರಲು ಜನತೆಯ ಜನಾಂದೋಲನವಾಗಬೇಕು. ಪರಸ್ಪರ ಕೂಡಿ ಬಾಳುವ ಐಕ್ಯತೆಯನ್ನು ಪ್ರತಿಪಾದಿಸುವ ಕಾರ್ಯ ನಮ್ಮಿಂದ ಆಗಬೇಕು. ಸಾಮರಸ್ಯದಿಂದ ಕೂಡಿದ ಭಾರತ ನಮ್ಮದಾಗಬೇಕು.
“ಸರ್ವ ಜನಾಂಗದ ಶಾಂತಿಯ ತೋಟ……
ರಸಿಕರ ಕಂಗಳ ಸೆಳೆಯುವ ನೋಟ…..
ಹಿಂದೂ ಕ್ರೈಸ್ತ ಮಸಲ್ಮಾನ….
ಪಾರಸೀಕ ಜೈನರುದ್ಯಾನ……
ಎನ್ನುವ ಕುವೆಂಪರ ಪಧ್ಯದ ಸಾಲಿನ ಆಶಯ ಸಾಮರಸ್ಯದ ಪರಂಪರೆಯನ್ನು ಎತ್ತಿ ಹಿಡಿದಿದೆ.
ಅಬೂಬಕ್ಕರ್ ಕುದ್ರಡ್ಕ
ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕೆ.ಐ.ಸಿ ಕುಂಬ್ರ