Home ಅಂಕಣಗಳು ಕಳಂಕರಹಿತ ಮನಸ್ಸಿನ ನಾಯಕ ಮಹಮ್ಮದಲೀ ಶಿಹಾಬ್ ತಂಙಳ್

ಕಳಂಕರಹಿತ ಮನಸ್ಸಿನ ನಾಯಕ ಮಹಮ್ಮದಲೀ ಶಿಹಾಬ್ ತಂಙಳ್

ಅಬ್ದುಲ್ ಅಝೀಝ್ ಕೊಯ್ಯೂರು

ಸುಹಾನಾಳ ರೋಗಪೀಡಿತ ದೇಹವನ್ನು ಹೊತ್ತೊಯ್ದ ಆಂಬುಲೆನ್ಸಿನ ಸೈರನ್ನಿನ ಶಬ್ದವನ್ನು ನೂರಾರು ಸಾವಿರ ವಾಟ್ಸಾಪ್ ಸಾಗರಗಳ ಸ್ಟೇಟಸ್‌ನ ಅಲೆಗಳು ಪ್ರತಿಧ್ವನಿಸುತ್ತಿರುವುದನ್ನು ನಾವು ಕೇಳಿದೆವು. ಪ್ರಶಾಂತಚಿತ್ತನಾಗಿ ಗುರಿಯೆಡೆಗೆ ಚಲಾಯಿಸುವ ಹನೀಫ್ ರಿಯಲ್ ಹೀರೋನಾಗಿ ಮೆರೆಯುತ್ತಿದ್ದಾನೆ. ಇದನ್ನೆಲ್ಲಾ ನೋಡುತ್ತಿರುವಾಗಲೇ ವಾಹನದ ಹಿಂಬಂದಿಯಲ್ಲೊಂದು ಭಾವಚಿತ್ರವು ತನ್ನ ಶಾಂತಿಯ ಇತಿಹಾಸವನ್ನು ನನ್ನ ಮನಸ್ಸಲ್ಲಿ ನೆನಪಿಸುವಂತೆ ಮಾಡಿತು. ಅವರೇ ಪಾಣಕ್ಕಾಡ್ ಸೈಯದ್ ಮುಹಮ್ಮದಾಲಿ ಶಿಹಾಬ್ ತಂಙಳ್.
ಪಾಣಕ್ಕಾಡ್ ಸೈಯದ್ ಮುಹಮ್ಮದಾಲಿ ಶಿಹಾಬ್ ತಂಙಳ್ ಕೇವಲ ರಾಜಕೀಯ ನಾಯಕ, ಸಮುದಾಯದ ಮುಖಂಡನೋ ಅಥವಾ ಆಧ್ಯಾತ್ಮಿಕ ನಾಯಕನಾಗಿರಲಿಲ್ಲ. ಪಂಥೀಯತೆಯನ್ನು ಲೆಕ್ಕಿಸದೆ ಕೇರಳದ ಇಡೀ ಜನರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದ ನಿಜವಾದ ಪ್ರೀತಿಯ ಅನುಭವ ಇದು. ಅವರನ್ನು ಭೇಟಿಯಾದ ಯಾರೂ ಸಾವಿನವರೆಗೂ ತಂಙಳರೊಂದಿಗಿನ ತಮ್ಮ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಅವರು ಸಂವಹನ ನಡೆಸುವಲ್ಲೆಲ್ಲಾ ಬೇಷರತ್ತಾದ ಪ್ರೀತಿಯ ಪ್ರಜ್ಞೆ ಅವರಿಂದ ಹೊರಹೊಮ್ಮಿದೆ. ಬಹುಶಃ ಅದು ಅವರು ಪ್ರತಿನಿಧಿಸಿದ ಸಯ್ಯಿದ್‌ಗಳ ಆಧ್ಯಾತ್ಮಿಕ ಪರಂಪರೆಯಾಗಿರಬಹುದು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಪಾಣಕ್ಕಾಡ್ ಸೈಯದ್ ಮುಹಮ್ಮದ್ ಅಲಿ ಶಿಹಾಬ್ ಅವರನ್ನು ಕೊನೆಯ ಪ್ರವಾದಿ ಮುಹಮ್ಮದ್ ಅವರ ವಂಶಾವಳಿಯ ಒಂದು ಕೊಂಡಿಯಾಗಿ ವಿಶ್ವಾಸಿಗಳು ನೋಡಿದರು. ಹುಸೇನ್ ಶಿಹಾಬ್ ಆಟಕೋಯ ತಂಙಳ್, ಸೈಯದ್ ಕುಂಞಕೋಯ ತಂಙಲ್, ಸೈಯದ್ ಅಲಿ ಪೂಕೋಯ ತಂಙಲ್ ಮತ್ತು ಪಿ.ಎಂ.ಎಸ್.ಎ ಪೂಕೋಯಾ ತಂಗಲ್ ಹೀಗೆ ಪಾಣಕ್ಕಾಡ್ ತಂಙಳ್ ಸರಣಿಯಲ್ಲಿ ಸೈಯದ್ ಮುಹಮ್ಮದಲಿ ಶಿಹಾಬ್ ಜನಿಸಿದರು. ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಅವರು ‘ಪಾಣಕ್ಕಾಡ್ ತಂಙಳ್’ ಎಂಬ ಪವಿತ್ರ ಬಿರುದನ್ನು ತಮ್ಮಲ್ಲೇ ಕಾಪಾಡಿಕೊಂಡರು.
ಆಧ್ಯಾತ್ಮಿಕ ಸಾಂತ್ವನವನ್ನು ಪಡೆಯಲು, ಅವರನ್ನೊಮ್ಮೆ ಸ್ಪರ್ಶಿಸಲು ಮತ್ತು ಅವರನ್ನು ಸಂದರ್ಶಿಸಲು ಪ್ರತಿದಿನ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಸಾವಿರಾರು ಜನರು ಪಾಣಕ್ಕಾಡಿನ ಕೊಡಪ್ಪನಕ್ಕಲ್ ಕುಟುಂಬದ ಮನೆಯಲ್ಲಿ ಕಾಯುತ್ತಿದ್ದರು. ಕೇವಲ ಅವರಿಗೆ ಬೇಕಾಗಿದ್ದುದು ಜೀವನದ ದುಮ್ಮಾನಗಳಿಗೆ ಪಾಣಕ್ಕಾಡಿನ ಆಧ್ಯಾತ್ಮಿಕ ಕಾಳಜಿಯಷ್ಟೇ ಆಗಿತ್ತು. ಅವರಾದರೋ ಎಂದಿಗೂ ಮರೆಯಾಗದ ಪವಿತ್ರ ನಗುವಿನೊಂದಿಗೆ ಅದನ್ನೆಲ್ಲಾ ಬಯಸಿದವರಿಗೆ ಹೇರಳವಾಗಿ ನೀಡಿದರು. ಸಮಾಜದಲ್ಲಿನ ವಿವಾದಗಳು ಮತ್ತು ದ್ವೇಷಗಳನ್ನು ತೊಡೆದುಹಾಕಲು ಮತ್ತು ಕುಂದುಕೊರತೆಗಳು, ಆತಂಕಗಳನ್ನೆಲ್ಲಾ ಪರಿಹರಿಸಬಲ್ಲ ನ್ಯಾಯ ಕೇಂದ್ರವಾಗಿ ಮುಹಮ್ಮದಲೀ ಶಿಹಾಬ್ ತಂಙಳ್ ಆಧುನಿಕ ಕಾಲದಲ್ಲಿ ಕೊಡಪನಕ್ಕಲ್ಲಿನ ಸದನವನ್ನು ನಿರ್ವಹಿಸಲು ಸಮರ್ಥರಾಗಿದ್ದರು. ಅದೇನೂ ಸಣ್ಣ ಐತಿಹಾಸಿಕ ಸೇವೆಯಾಗಿರಲಿಲ್ಲ.

‘ಪಾಣಕ್ಕಾಡ್ ತಂಙಳ್’ ಆಗಿ, ಮುಹಮ್ಮದಲೀ ಶಿಹಾಬ್ ತಂಗಲ್ ಅಸಂಖ್ಯಾತ ಮಹಲ್‌ಗಳ ಖಾಝಿಯಾಗಿ, ಅನೇಕ ಸಂಸ್ಥೆಗಳ ಮುಖ್ಯಸ್ಥರಾಗಿ, ಮತ್ತು ಸಮುದಾಯದಲ್ಲಿ ಒಟ್ಟಾರೆಯಾಗಿ ಯಾವುದೇ ಆಕ್ಷೇಪಣೆಗಳಿಲ್ಲದೆ ಸೇವೆ ಸಲ್ಲಿಸಿದರು. ಮುಸ್ಲಿಂ ಲೀಗ್‌ನ ಅಧ್ಯಕ್ಷರಾಗಿ ರಾಜಕೀಯ ಅವಧಿಯಲ್ಲಿ, ಅವರು ದಶಕಗಳ ಕಾಲ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿ ಒಂದೇ ಒಂದು ಕಪ್ಪು ಚುಕ್ಕೆ ಕೂಡ ಅವರ ಬಿಳಿ ವಸ್ತೃದ ಮೇಲೆ ಬೀಳದಂತೆ ನೋಡಿಕೊಂಡರು. ಅವರು ತಮ್ಮ ಜೀವನದುದ್ದಕ್ಕೂ ನಿಷ್ಠಾವಂತ ಸಾರ್ವಜನಿಕ ಜೀವನವನ್ನು ನಡೆಸಿದರು, ಮುಸ್ಲಿಂ ಸಮುದಾಯವನ್ನು ಮಾತ್ರವಲ್ಲದೆ ಕೇರಳದ ಎಲ್ಲಾ ವರ್ಗದ ಜನರನ್ನು ಗೌರವಿಸಿದರು. ಆ ಜೀವನವು ಪ್ರತಿ ಅರ್ಥದಲ್ಲಿ ಒಂದು ಪವಾಡವಾಗಿತ್ತು.

ನಿಸ್ಸಂದೇಹವಾಗಿ, ಕಳೆದ ಶತಮಾನದಲ್ಲಿ ಕೇರಳವನ್ನು ನೋಡಿದ ಮಹಾನ್ ವ್ಯಕ್ತಿಗಳಲ್ಲಿ ಪಾಣಕ್ಕಾಡ್ ಮುಹಮ್ಮದಾಲಿ ಶಿಹಾಬ್ ತಂಙಳ್ ಒಬ್ಬರು. ಒಮ್ಮೆ ಮಲಪ್ಪುರಂನಲ್ಲಿ ನಡೆದ ಒಂದು ಘಟನೆ. ಅವರು ಒಂದು ಸಮಾರಂಭಕ್ಕಾಗಿ ತೆರಳುತ್ತಿದ್ದಾಗ ದಾರಿಯಲ್ಲಿ ಅವರ ವಾಹನವು ಬೇರೆ ದಾರಿಯಲ್ಲಿ ತಿರುಗಿತು. ನಾವು ದಾರಿ ತಪ್ಪಿದ್ದೇವೆಯೇ ಎಂದು ಸಹಚರರು ಆಶ್ಚರ್ಯಪಟ್ಟಾಗ, ಒಬ್ಬ ಸಹಚರನು ಹೀಗೆ ಹೇಳಿದನು: ‘ಇಲ್ಲ. ಅವರು ಬರುತ್ತಾರೆ. ಅವರು ಬೆಳಿಗ್ಗೆ ಚಿನ್ನದ ಅಂಗಡಿಯೊಂದರ ಉದ್ಘಾಟನೆಗಾಗಿ ಹೋದಾಗ, ಅವರಿಗೆ ಅಲ್ಲೊಂದು ಉಡುಗೊರೆಯನ್ನು ಕೊಟ್ಟರು. ಅದನ್ನು ಯಾವುದೋ ಒಬ್ಬ ಅನಾಥ ಹೆಣ್ಣಿನ ಮದುವೆಯಲ್ಲಿ ನೀಡಿ ಹಿಂದಿರುಗಿ ಬರುತ್ತಾರೆ ಎಂದು ಹೇಳಿದ. ಹೀಗೆ, ಯಾರಾದರೂ ಅವರಿಗೆ ಏನು ಕೊಟ್ಟರೂ, ಯಾವುದಾದರೂ ಬಡವರು ಅಥವಾ ಅನಾಥರು ಅದನ್ನು ಪಡೆಯುತ್ತಾರೆ. ಸಮುದಾಯದಲ್ಲಿ ಸಹಾನುಭೂತಿ, ದಯೆ ಮತ್ತು ಪ್ರೀತಿಯನ್ನು ಹರಡಲು ಅವರು ವಿಶ್ವಾಸಾರ್ಹ ಮಹಾನ್ ಮಾನವೀಯ ಸೇತುವೆಯಾಗಿ ಮಾತ್ರ ಕಾರ್ಯನಿರ್ವಹಿಸಿದರು. ಹಣ, ಖ್ಯಾತಿ, ಸ್ಥಾನಮಾನ, ಪ್ರಶಸ್ತಿ ಇವೊಂದನ್ನೂ ಪಾಣಕ್ಕಾಡ್ ತಂಙಳ್ ಬಯಸಲಿಲ್ಲ. ಇದುವೇ ಅವರಿಗೆ ಸಂದ ಎಲ್ಲಾ ಗೌರವಗಳ ರಹಸ್ಯವಾಗಿತ್ತು. ತನ್ನನ್ನು ಶೂನ್ಯವಾಗಿಸಬಲ್ಲ ಬಲವಾದ ನಮ್ರತೆ ಎಲ್ಲೆಡೆ ‘ಪೂಜ್ಯ’ವಾಗುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್ ಅವರಿಗೆ ಇದು ಅವರಿಗೆ ಅಕ್ಷರಶಃ ಸರಿಹೊಂದುತ್ತಿತ್ತು. ಅಧಿಕಾರವನ್ನು ಕೇಳುವವರಿಗೆ ಮತ್ತು ಅದನ್ನು ಬಯಸುವವರಿಗೆ ಅಧಿಕಾರವನ್ನು ನೀಡದಿರುವ ಬಗ್ಗೆ ಪ್ರವಾದಿ (ಸ) ರವರ ಮಾತುಗಳು ಅವರಿಗೆ ಅಕ್ಷರಶಃ ಅರ್ಥವತ್ತಾಗಿತ್ತು. ಅವರಿಗೆ ಏನೂ ಬೇಡವಾಗಿದ್ದರಿಂದಲೇ ಅವರಿಗೆ ಎಲ್ಲವೂ ಸಿಕ್ಕಿತು. ನಿಸ್ವಾರ್ಥವಾಗಿ ಜೀವನವನ್ನು ನಡೆಸಿ ಎಲ್ಲವನ್ನೂ ಪರಿಪೂರ್ಣ ನ್ಯಾಯದೊಂದಿಗೆ ಎಲ್ಲರ ಅನುಕೂಲಕ್ಕಾಗಿ ಅಧಿಕಾರವನ್ನು ಬಳಸಿಕೊಂಡರು.

ಬಾಬರಿ ಮಸೀದಿ ಉರುಳಿದ ಸಂದರ್ಭದಲ್ಲಿ ಅವರು ತಮ್ಮ ಸಮುದಾಯಕ್ಕೆ ನೀಡಿದ ಸಂಯಮ, ತಾಳ್ಮೆ ಮತ್ತು ಸಹಿಷ್ಣುತೆಯ ಸಂದೇಶವೇ ಪಾಣಕ್ಕಾಡ್ ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ಅವರ ಶ್ರೇಷ್ಠ ರಾಷ್ಟ್ರೀಯ ಸೇವೆಯಾಗಿದೆ. ಬಾಬರಿ ಮಸೀದಿಯ ಧ್ವಂಸವು ಭಾರತ ಕಂಡ ಅತ್ಯಂತ ದೊಡ್ಡ ರಾಷ್ಟ್ರೀಯ ದುರಂತಗಳಲ್ಲಿ ಒಂದಾಗಿದೆ. ಅಂದು ಭಾರತದ ಶ್ರೇಷ್ಠ ಜಾತ್ಯತೀತ, ಸಹಸ್ರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸಹೋದರತ್ವ ಮತ್ತು ಪ್ರೀತಿಯ ಪರಂಪರೆಯ ಗೋಪುರಗಳು ಬಾಬರಿ ಮಸೀದಿಯ ಮಿನಾರಗಳ ಜೊತೆಗೆ ಕುಸಿದುಬಿದ್ದವು. ಅದರಿಂದ ನೊಂದ ದೊಡ್ಡ ಸಮುದಾಯದ ಮನಸ್ಸಿನ ಅಸಮಾಧಾನವು ಇಡೀ ಭಾರತವನ್ನು ರಕ್ತಪಾತ ಮತ್ತು ಗಲಭೆಗಳ ತಾಣವಾಗಿ ಪರಿವರ್ತಿಸುತ್ತಿತ್ತು. ಅಲ್ಲಿಯೇ ಶಿಹಾಬ್ ತಂಙಳ್ ಕೆರಳಿದ ಸಮುದ್ರಗಳ ಆರ್ಭಟವನ್ನು ಪ್ರೀತಿಯಿಂದ ಉದಾತ್ತ ಸಹೋದರತ್ವದ ಪರ್ವತದಂತೆ ಅಡ್ಡಲಾಗಿ ನಿಂತು ಅದನ್ನು ತಡೆದರು.
ನಂಬಿಕೆ ಮತ್ತು ಧರ್ಮದ ಹೆಸರಿನಲ್ಲಿ ಯಾರಾದರೂ ಜನರನ್ನು ಕೆರಳಿಸಬಹುದು. ಆದರೆ ನಂಬಿಕೆಗಳು ಗಾಯಗೊಂಡು ಕ್ರೋಧದೊಡನೆ ಭೊರ್ಗರೆದು ಬರುವ ಸಮುದ್ರಗಳನ್ನು ಶಾಂತಿಯವಾಹಕನಾಗಿ ಮುಹಮ್ಮದ್ ಅಲಿ ಶಿಹಾಬ್ ತಂಙಳರಂತೆ ಒಬ್ಬಿಬ್ಬರು ಮಾತ್ರ ತನ್ನ ಶಾಂತಿಮಂತ್ರದ ಮೂಲಕ ಸಮಾಧಾನಿಸಬಲ್ಲರು. ಮತ್ತು ಅದನ್ನು ಸಾಧಿಸಿಯೂ ತೋರಿಸಿದ್ದರು

ಪಾಣಕ್ಕಾಡ್ ಸೈಯದ್ ಮುಹಮ್ಮದ್ ಅಲಿ ಶಿಹಾಬ್ ನಿರ್ಗಮಿಸಿ ಹಲವು ವರ್ಷಗಳು ಕಳೆದ ಈ ಸನ್ನಿವೇಶದಲ್ಲಿ ಕಲುಷಿತವಾದ ವರ್ತಮಾನ ಭಾರತದ ಚರಿತ್ರೆಯನ್ನು ಶಾಂತಿಯ ಮೂಲಕ ಬಗೆಹರಿಸಲು ಪಾಣಕ್ಕಾಡ್ ತಂಙಳರಂತೆ ನೆರಳು ನೀಡುವ ಒಬ್ಬರಿಲ್ಲವಲ್ಲ ಎನ್ನುವುದು ನಮ್ಮ ಅತಿದೊಡ್ಡ ನಷ್ಟವೇ ಸರಿ. ಆದರೆ ಆ ಪರಿಶುದ್ಧ ಪ್ರೀತಿಯ ನಗು ತಲೆಮಾರುಗಳಿಗೆ ಆಸೆಯನ್ನು ದೇಶಕ್ಕೆ ಭರವಸೆ ಮತ್ತು ಒಳ್ಳೆಯದನ್ನು ನೀಡಲು ಎಂದಿಗೂ ವಿಫಲವಾಗುವುದಿಲ್ಲ ಎಂಬುದನ್ನು ನಂಬೋಣ. ಅದರ ಸಾಕ್ಷಿಯಾಗಿ ನಿನ್ನೆಯಷ್ಟೇ ಅವರ ಹೆಸರಲ್ಲಿ ನಡೆದ ಅತಿದೊಡ್ಡ ಮಾನವೀಯ ಸೇವೆಯನ್ನೇ ಉದಾಹರಿಸೋಣ ಅಲ್ಲವೇ?

Previous articleಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ದಾರುನ್ನೂರ್ ಯುಎಇ ವತಿಯಿಂದ ಪ್ರಬಂಧ ಸ್ಪರ್ಧೆ ತಲುಪಿಸಲು ಕೊನೆಯ ದಿನಾಂಕ 25.11.2020
Next articleSKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ಅದೀನದಲ್ಲಿ ಯುಎಇ ರಾಷ್ಟ್ರೀಯ ದಿನಾಚರಣೆ: ಝೂಮ್ ಆನ್ ಲೈನ್ ನಲ್ಲಿ SKSSF ಕರ್ನಾಟಕ ದುಬೈ ಸಮಿತಿಯ ಸ್ಪೂರ್ತಿದಾಯಕ ಪಯಣ.

LEAVE A REPLY

Please enter your comment!
Please enter your name here