Home ಅಂಕಣಗಳು ಮತದಾರರೇ, ನಿಮಗೊಂದು ತತ್‌ಕ್ಷಣದ ಆಯುಧ ಒಲಿದಿದೆ.

ಮತದಾರರೇ, ನಿಮಗೊಂದು ತತ್‌ಕ್ಷಣದ ಆಯುಧ ಒಲಿದಿದೆ.

📝ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು

ಚುನಾವಣಾ ಆಯೋಗವು ಗ್ರಾಮ ಪಂಚಾಯತ್ ಚುನಾವಣೆಯನ್ನು ಘೋಷಿಸಿದೆ. ಸದ್ಯಕ್ಕಂತೂ ಆಯುಧವೊಂದು ಸಿಗಬೇಕಾದ ಹೊತ್ತಿನಲ್ಲೇ ಪ್ರಜೆಗಳ ಕೈಗೆ ಸಿಕ್ಕಂತಾಗಿದೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಸಾಮಾನ್ಯವಾಗಿ ರಾಜಕೀಯ ಅವಕಾಶಗಳ ಮೆಟ್ಟಿಲೆಂದು ಭಾವಿಸುವ ಪಂಚಾಯತ್ ಚುನಾವಣೆಯು ಘೋಷಣೆಗೊಂಡ ಕೆಲದಿನಗಳಲ್ಲೇ ದುಡ್ಡುಕೊಟ್ಟು ಎದುರಾಳಿ ಪಕ್ಷದ ನಾಮಪತ್ರವನ್ನು ಹಿಂದೆಗೆದುಕೊಳ್ಳುವಂತೆ ಮಾಡಿ ಅವಿರೋಧ ಆಯ್ಕೆಯ ನಾಟಕಗಳಿಂದ ಪ್ರಜಾಪ್ರಭುತ್ವದ ಭರವಸೆಯನ್ನೇ ನುಚ್ಚುನೂರು ಮಾಡಿದೆ. ಕಾಸಿದ್ದೋನೇ ಬಾಸು ಎನ್ನುವಂತೆ ಇಡೀ ಪ್ರಜಾತಂತ್ರವನ್ನೇ ದುಡ್ಡುಕೊಟ್ಟು ಖರೀದಿಸುವ ಈ ತಂತ್ರವು ಇಂದು ನಿನ್ನೆಯದೇನಲ್ಲ. ಕೋಟಿಗಳನ್ನು ಸುರಿದು ಶಾಸಕರನ್ನೇ ಕೊಂಡುಕೊಳ್ಳುವ ಕುದುರೆವ್ಯಾಪಾರ ಈಗಿನ ರಾಜಕೀಯದ ಟ್ರೆಂಡ್ ಆಗಿರುವುದು ನಮಗೆಲ್ಲಾ ಗೊತ್ತೇ ಇದೆ. ಇತ್ತೀಚಿನ ಕೆಲದಿನಗಳಿಂದ ಪ್ರಚಲಿತದಲ್ಲಿರುವ ಮಾತಿನಂತೆ, ನೀಡುವುದು ಇನ್ನೊಬ್ಬನಿಗಾದರೂ ಅದು ಕೊನೆಗೆ ಹರಿದು ಸಂಗಮವಾಗುವುದು ಇನ್ನೊಂದೆಡೆಗೆ. ಅರ್ಥವನ್ನು ನೀವೇ ಊಹಿಸಬಹುದು.

ಅದೇನೇ ಇರಲಿ. ಈಗಿನ ಭಾರತದ ಕಡೆಗೊಮ್ಮೆ ಕಣ್ಣಾಯಿಸೋಣ. ಪ್ರಸಕ್ತ ಭಾರತದ ಪ್ರಜೆಯ ಭವಿಷ್ಯ ತೂಗುಗತ್ತಿಯ ಕೆಳಗಿದೆ. ಎನ್.ಆರ್.ಸಿ ಸಿ.ಎ.ಎ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರನ್ನು ತೊಡೆದುಹಾಕುವ ಸಂಚು ಸಮಯಕ್ಕಾಗಿ ಕಾದು ಕುಳಿತಿದೆ. ಸರಿಯಾದ ದಿಕ್ಕುದೆಸೆಯಿಲ್ಲದೆ ವಲಸಿಗರನ್ನು ಕಾನೂನಿನ ಮೂಲಕ ಆರಂಭದಲ್ಲೇ ತಡೆಯಲು ಸಾಧ್ಯವಾಗದ ಸರ್ಕಾರವು ಇದೀಗ ಕ್ರೂರ ಕಾನೂನನ್ನು ಸದನದ ಸಂಖ್ಯೆಯ ಗುಮ್ಮವನ್ನು ತೋರಿಸಿ ಸರ್ವಾಧಿಕಾರದ ಮೂಲಕ ಜಾರಿ ಮಾಡಲು ಹೊರಟಿದೆ.


ಕಾರ್ಪೊರೇಟ್‌ಗಳ ಜೇಬನ್ನು ಇನ್ನಷ್ಟು ಭದ್ರಪಡಿಸುವ ನೂತನ ಕೃಷಿ ಕಾಯ್ದೆಯನ್ನು ತಂದು ಮೊದಲೇ ತನ್ನ ಬೆಲೆಗೆ ನಷ್ಟವನ್ನೇ ಅನುಭವಿಸುತ್ತಿರುವ ಅನ್ನದಾತನ ರೋದನ ಮುಗಿಲುಮುಟ್ಟಿದೆ. ಅವರ ಅಳಲನ್ನು ಕೇಳಲು ಅಧಿಕಾರದಲ್ಲಿರುವವರಿಗೆ ಸಮಯ ಸಿಗುತ್ತಿಲ್ಲ. ತಮ್ಮ ನೌಕರಿಯ ಭದ್ರತೆಗಾಗಿ ದಿನಂಪ್ರತಿ ನೌಕರರು ಧ್ವನಿಯೆತ್ತುತ್ತಲೇ ಇದ್ದಾರೆ. ಅವರಿಗೆ ನ್ಯಾಯ ಗಗನಕುಸುಮವಾಗಿದೆ. ಹಸಿದ ಹೊಟ್ಟೆಗೆ ತುತ್ತು ಅನ್ನ ಹಾಕುವುದು ಇರಲಿ ಅವನ ಇರುವ ಆಹಾರವನ್ನೇ ಕಸಿದುಕೊಳ್ಳುವ ಗೋಹತ್ಯೆ ನಿಷೇಧದ ಮೂಲಕ ಬಡವನ ಹೊಟ್ಟೆಗೆ ಕನ್ನಹಾಕಲಾಗಿದೆ. ಕಾರ್ಪೊರೇಟ್ ದೈತ್ಯರು ಭೂಮಿಯನ್ನು ಒಂದಿಂಚು ಬಿಡದೇ ಸರ್ಕಾರಗಳನ್ನು ಬಳಸಿಕೊಂಡು ಹೀರುತ್ತಿದ್ದಾರೆ. ನ್ಯಾಯಯುತ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳಿಗೆ ಉಗ್ರಪಟ್ಟವನ್ನೋ ನಕ್ಸಲ್ ಪಟ್ಟವನ್ನೋ ಕಟ್ಟಿ ನೊಂದದನಿಗಳನ್ನು ಅಡಗಿಸಲಾಗುತ್ತಿದೆ. ವಿದ್ಯಾರ್ಥಿ ಹೋರಾಟಗಳು ದೇಶದ್ರೋಹಗಳಾಗಿ ಮುದ್ರೆಯೊತ್ತಲ್ಪಡುತ್ತಿದೆ. ಅಥವಾ ಬುಡಮೇಲುಗೊಳಿಸಲಾಗುತ್ತಿದೆ.

ಕೈಗೆಟಕುತ್ತಿದ್ದ ದಿನಬಳಕೆಯ ಅಡುಗೆ ಅನಿಲದ ಬೆಲೆಯನ್ನು ಬಡವನೊಬ್ಬ ತನ್ನ ವಾರದ ಇಡೀ ದುಡಿಮೆಯನ್ನೇ ನೀಡಬೇಕಾಗುವಷ್ಟರ ಮಟ್ಟಿಗೆ ಏರಿಸಲಾಗಿದೆ. ಪೆಟ್ರೋಲ್, ಡೀಸೆಲ್ ಕಚ್ಚಾತೈಲಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಕುಸಿತ ಕಂಡಿದ್ದರೂ ಸಾಮಾನ್ಯ ನಾಗರಿಕರು ದುಪ್ಪಟ್ಟು ಬೆಲೆಯನ್ನು ತೆತ್ತು ದಿನಂಪ್ರತಿ ಖರೀದಿಸುತ್ತಿದ್ದಾರೆ. ಆಧುನಿಕ ಭಾರತದೆಡೆಗೆ ಮುನ್ನಡೆಸಿದ ಹಿಂದಿನ ನಾಯಕರ ಅಸಾಮಾನ್ಯ ಸರ್ಕಾರದ ಸಂಸ್ಥೆಗಳೆಲ್ಲಾ ಮಾರುಕಟ್ಟೆಯಲ್ಲಿ ಸಾಮಾನ್ಯ ವಸ್ತುವೊಂದು ಬಿಕರಿಯಾಗುವಂತೆ ಖಾಸಗಿ ವಲಯದ ಪಾಲಾಗುತ್ತಿದೆ.

ಹೀಗೆ ಸದ್ಯ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಹೇಳತೀರದ ಮಟ್ಟಿಗೆ ಅಲ್ಲೋಲಕಲ್ಲೋಲವಾಗಿದೆ. ಮಹಾತ್ಮಾ ಗಾಂಧಿಯವರು ಭಾರತದ ಭವಿಷ್ಯ ಗ್ರಾಮಗಳಲ್ಲಿದೆಯೆಂದು ಒಂದೊಮ್ಮೆ ನುಡಿದಂತೆ ನಮ್ಮ ಬದಲಾವಣೆಯ ಪರ್ವವನ್ನು ಇಲ್ಲಿಂದಲೇ ಆರಂಭಿಸಬೇಕಿದೆ. ಪರಿಹರಿಸಲೇಬೇಕಾದ ಹಲವು ಗಂಭೀರವಾದ ಚರ್ಚೆಗಳನ್ನು ಬದಿಗೊತ್ತಿ ಭಾವನಾತ್ಮಕ ವಿಷಯಗಳನ್ನೇ ಮುನ್ನೆಲೆಗೆ ತಂದು ಜನರ ದಿಕ್ಕುತಪ್ಪಿಸುತ್ತಿರುವ ಅಧಿಕಾರಸ್ಥರ ದರ್ಪವನ್ನು ಇಳಿಸಿ ಪಂಚಾಯತ್ ಚುನಾವಣೆಯನ್ನೇ ಬಳಸಿಕೊಂಡು ಮೊದಲ ಪ್ರಯತ್ನವೆಂಬಂತೆ ಅವರನ್ನೆಲ್ಲಾ ಮನೆಗೆ ಕಳುಹಿಸುವತ್ತ ಮತದಾರ ಗಮನಹರಿಸಬೇಕಾಗಿದೆ. ಅದಕ್ಕಾಗಿ ಮನೆಬಳಿಯ ಪಂಚಾಯತನ್ನು ಶುಧ್ಧಿಗೊಳಿಸುವ ಆಯುಧವೊಂದು ನಮಗೆ ಸಿಕ್ಕಿದೆ. ಪರಿಣಾಮಕಾರಿಯಾಗಿ ಬಳಸೋಣವೇ?

Previous articleಜೀಲಾನಿ ದಿನ ಹಾಗೂ ಸಮಸ್ತದ ಅಗಲಿದ ಚೇತನಗಳ ಅನುಸ್ಮರಣಾ ಸಮಾರಂಭ
Next articleಕಾಲವು ಕಾಯುತ್ತಿದೆ ಮರ್ಹೂಮ್ ಮಿತ್ತಬೈಲು ಉಸ್ತಾದರಂತಹ ಮಹಾನುಭಾವರಿಗಾಗಿ.

LEAVE A REPLY

Please enter your comment!
Please enter your name here