📝ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ
ನಿಜಕ್ಕೂ ಅದು ಮನಸ್ಸನ್ನು ತೀವ್ರವಾಗಿ ಅಲ್ಲಾಡಿಸಿದ ಟೈಮು. ಎಲ್ಲೆಡೆ ಶೋಕ ಸಾಗರ, ಎಲ್ಲೆಲ್ಲೂ ಸ್ತಬ್ಧ, ಒಂದೆಡೆ ಮನೆ ಮಂದಿಯಲ್ಲ ಸೇರಿಕೊಂಡು ಪ್ರಾರ್ಥನೆ ,ಸಂತಾಪಗಳಲ್ಲಿ ತಲ್ಲೀನರಾದರೆ, ಮತ್ತೊಂದು ಕಡೆ ಅಗಲಿದ ಉಸ್ತಾದರ ಅಂತಿಮ ದರ್ಶನಕ್ಕಾಗಿ ಆ ರಾತ್ರಿಯಲ್ಲೂ ಸಿಕ್ಕ ವಾಹನಗಳಲ್ಲಿ ಮಿತ್ತಬೈಲಿಗೆ ಹೊರಟೇ ಬಿಟ್ಟಿದ್ದರು ಜನ.
ಅಂದು ಕೆಐಸಿಯಿಂದ ಮಿತ್ರರಾದ ಅನೀಸ್ ಕೌಸರಿ ಮತ್ತು ಸತ್ತಾರ್ ಕೌಸರಿ ಯೊಂದಿಗೆ ಉಸ್ತಾದರ ವಫಾತ್ ನ ಸುದ್ದಿ ತಿಳಿದ ತಕ್ಷಣ ಮಿತ್ತಬೈಲಿಗೆ ಹೊರಟೆವು, ಅಲ್ಲಿ ತಲುಪಿದಾಗ ಆಗಲೇ ಅಲ್ಲಿ ಸೇರಿದ ಜನ ಸಾಗರ, ಓರ್ವ ವಿದ್ವಾಂಸ ಯಾವ ರೀತಿ ಜನಮಾನಸದಲ್ಲಿ ಪ್ರೀತಿ, ಗೌರವ ಗಳಿಸಿ ಕೊಳ್ಳುತ್ತಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿ ತೋರಿಸಿತು.
ನಮ್ಮ ಹೆಮ್ಮೆಯ ‘ವಿಖಾಯ’ ದ ಸ್ವಯಂ ಸೇವಕರ ಸಹಕಾರದಿಂದ ಉಸ್ತಾದರ ‘ಜನಝಾ’ಬಳಿ ತಲುಪಲು ಹರಸಾಹಸ ಪಡಬೇಕಾಯಿತು ಅಂದರೆ ಇದು ನಮ್ಮಂತೆ ಆ ದುಃಖ ವಾರ್ತೆ ತಿಳಿದ ಕೇವಲ ಒಂದೆರೆಡು ಗಂಟೆಯ ಒಳಗೆ ಸೇರಿದ ಜನಸ್ತೋಮ !, ಆ ರಾತ್ರಿಯಿಡೀ ಹರಿದು ಬಂದ ಜನ ಪ್ರವಾಹ ಹಾಗೂ ಮರುದಿನ ದಫನದ ಸಂದರ್ಭದ ಬಗ್ಗೆ ಬೇರೆ ಹೇಳಬೇಕಾಗಿಲ್ಲ ಬಿಡಿ.
ಮೂಲತಃ ಕಿಲ್ತಾನ್ ದ್ವೀಪದ ಉಲಮಾಗಳ ಹಾಗೂ ತ್ವರೀಖತ್ ನ ಶೈಖ್ ಗಳ ಆಧ್ಯಾತ್ಮಿಕವಾಗಿ ಪ್ರಸಿದ್ಧಿ ಪಡೆದ ಕುಟುಂಬದಿಂದ ಬಂದ ಅಬ್ದುಲ್ ಜಬ್ಬಾರ್ ಉಸ್ತಾದ್ ಅವರು ಕೇರಳದ ಪೊಣ್ಣಾನಿ ಮುಂದೆ ವೆಲ್ಲೂರಿನ ಬಾಖಿಯಾತ್ ಸ್ವಾಲಿಯಾತ್ ಮತ್ತು ದಯೂಬಂದ್ ಮೊದಲಾದ ಕಾಲೇಜ್ ಗಳಿಂದ ಪದವಿಯ ಮೇಲೆ ಪದವಿ ಪಡೆದ ನಂತರ ಧಾರ್ಮಿಕ ಸೇವೆಗೆ ಸಮರ್ಪಿತರಾದದ್ದು ನಮ್ಮ ಸೌಭಾಗ್ಯವೆಂಬಂತೆ ನಮ್ಮ ಕರುನಾಡಿಗೆ. ಪ್ರತಿಷ್ಠಿತ ಮಿತ್ತಬೈಲು ಮಸೀದಿಗೆ ಮುದರ್ರಿಸರಾಗಿ ನೇಮಕ ಗೊಂಡ ಉಸ್ತಾದ್ , ಮುಂದೆ ಮಿತ್ತಬೈಲಿನ ಮುತ್ತಾಗಿ, ಕರುನಾಡ ಕಣ್ಮನಿಯಾಗಿ, ಸಮುದಾಯದ ಸೊತ್ತಾಗಿ ಗುರುತಿಸಿ ಕೊಂಡದ್ದೆಲ್ಲವೂ ಇತಿಹಾಸ.
ಇಲ್ಲಿ ಸರ್ವರ ನಾಯಕರಾಗಿ ಮಾರ್ಗದರ್ಶಕರಾಗಿ, ನೇತೃತ್ವ ನೀಡಿದ ಉಸ್ತಾದ್ ತಮ್ಮ ಅಗಾಧ ಪಾಂಡಿತ್ಯ ,ಸರಳ ಸಜ್ಜನಿಕೆಯ ವ್ಯಕ್ತಿತ್ವ ,ಗತ್ತು ಗೈರತ್ತು ಗೊತ್ತಿಲ್ಲದ ಸಾತ್ವಿಕ ಬದುಕು, ನಿಷ್ಕಳಂಕ ವ್ಯಕ್ತಿತ್ವದ ಮೂಲಕ ಜನ ಮಾನಸದಲ್ಲಿ ವಿಶೇಷ ಸ್ಥಾನವನ್ನು ಗಳಿಸಿ ಕೊಂಡರು.
ವ್ಯಕ್ತಿಗತವಾಗಿ ಸತ್ಯದ ಹಾದಿಯಲ್ಲಿ ತಖ್ವಾದ ಮೇಲೆ ನಿರ್ಮಲ ಶುಭ್ರ ಬದುಕು ಕಟ್ಟಿ ,ಜನರಿಗೂ ಅದನ್ನು ಮಾದರಿ ನಡೆ,ನುಡಿಯ ಮೂಲಕ ಕಲಿಸಿ ಕೊಟ್ಟ ಉಸ್ತಾದ್, ‘ಸಮಸ್ತ’ ಎಂಬ ಗಡಿ,ಭಾಷೆಗಳ ರೇಖೆ ದಾಟಿದ ವಿಶ್ವಾಸಿಗಳ ಮನ ಜೋಡಿಸಿದ ಪವಿತ್ರ ಸಾಂಘಿಕ ಸೇತುವಿನ ಮೂಲಕ ಆಧ್ಯಾತ್ಮಿಕ ತಂತುವಿನಲ್ಲಿ ರಾಜ್ಯ, ಭಾಷೆಗಳ ಸೀಮೆ ದಾಟಿ ಸುನ್ನಿಗಳ ಮಾನಸದಲ್ಲಿ ಭದ್ರವಾಗಿ ಉಳಕೊಂಡರು.
ಸಾಂಘಿಕವಾಗಿ ಆರಂಭ ಕಾಲದಲ್ಲಿ ದ.ಕ.ಜಿಲ್ಲಾ ಎಸ್ಕೆಎಸ್ಸೆಸೆಫ್ ನ ನಮ್ಮ ಹಲವು ಕಾರ್ಯಕ್ರಮಗಳಿಗೆ ಉಸ್ತಾದ್ ರವರೆ ಪ್ರಾರ್ಥನೆ, ಉದ್ಗಾಟನೆಯ ಮೂಲಕ ಚಾಲನೆ ನೀಡುತ್ತಿದ್ದರು. ಮಿತ್ರರಾದ ಇ.ಕೆ.ಎಂ.ಶರೀಫ್ ಮುಸ್ಲಿಯಾರ್, ಕೆ.ಎಲ್.ಉಮರ್ ದಾರಿಮಿ, ಕೆ.ಬಿ.ದಾರಿಮಿ, ಮರ್ಹೂಂ ಸವಣೂರು ಉಮರ್ ಮುಸ್ಲಿಯಾರ್ ,ಅಬೂ ಸಿರಾಜ್ ಮೊದಲಾದವರನ್ನಳಗೊಂಡ ನಮ್ಮ ಟೀಮು ಸಾಂಘಿಕ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲು ಉಸ್ತಾದ್ ರವರನ್ನು ಆಗಾಗ ಭೇಟಿ ಮಾಡುತ್ತಿದ್ದೇವು. ನಮಗೆ ಸ್ವಂತದ್ದಾದ ಪತ್ರಿಕೆಗಳಿರದ ಆ ಟೈಮಲ್ಲಿ ದಿನ ಪತ್ರಿಕೆಗಳಿಗೆ ವರದಿ , ಲೇಖನ ಗಳನ್ನು ಬರೆದು’ಸಮಸ್ತ’ ದ ಸಂದೇಶವನ್ನು ಪ್ರಚಾರ ಪಡಿಸಬೇಕೆಂದು ಎಸ್.ಬಿ.ಉಸ್ತಾದ್ ಮತ್ತು ಈ ವಿನೀತನಲ್ಲಿ ಅವರು ಒತ್ತಿ ಹೇಳುತ್ತಿದ್ದರು.
ಆಡಂಬರವನ್ನು ಎಂದೂ ಇಷ್ಟಪಡದೆ ಸರಳವಾಗಿ ಬದುಕಿದ ಉಸ್ತಾದ್ ,ಉನ್ನತ ಖಾಝಿ ಸ್ಥಾನವನ್ನೇ ಒಪ್ಪಿಕೊಳ್ಳಲಿಲ್ಲ.
ಮಿತ ಭಾಷಿಯಾಗಿದ್ದ ಉಸ್ತಾದ್, ಓರ್ವ ಶಾಂತಿ ದೂತನಾಗಿ, ಅಜಾತ ಶತ್ರುವಾಗಿ ಗುರುತಿಸಿ ಕೊಂಡಿದ್ದರು ಎಂದರೆ ಅತಿಶಯೋಕ್ತಿಯಲ್ಲ,ಯಾವುದೇ ವಿವಾದಗಳಿದ್ದರೂ ತಕ್ಷಣ ಆತುರದಿಂದ ಪ್ರತಿಕ್ರಿಯಿಸದೆ ಕೂಲಂಕಷವಾಗಿ ಯೋಚಿಸಿಯೇ ಪರಿಹಾರ ಸೂಚಿಸುತ್ತಿದ್ದರು ಎಂಬುದು ಅವರ ಬದುಕಿನ ಹೆಗ್ಗಳಿಕೆಯಾಗಿತ್ತು.
ಅದೇ ಕಾರಣಕ್ಕೆ ಅವರ ಅಗಲಿಕೆಯ ಸುದ್ದಿ ಕೇಳಿ ಸಂಘಟನೆ ,ಸಿದ್ಧಾಂತ ಹಾಗೂ ಜಾತಿ ,ಧರ್ಮದ ಹಂಗಿಲ್ಲದೆ ಎಲ್ಲರೂ ದುಃಖಿಸಿದರು. ಅಂತಿಮ ದರ್ಶನಕ್ಕೂ ಬಂದರು.ಉಸ್ತಾದ್ ಈಗ ನಮ್ಮೊಂದಿಗಿಲ್ಲ, ಆದರೆ ಅವರ ನೆನಪು ಮಾತ್ರ ಸದಾ ಅನುರಣಿಸುತಿದೆ. ಅವರು ತೋರಿದ ಆದರ್ಶ ನಮ್ಮ ಮುಂದೆ ಇದೆ ಅದನ್ನು ಮಾದರಿ ಯಾಗಿಸಿ ಮುನ್ನಡೆಯೋಣ ,ಅದುವೇ ಉಸ್ತಾದರಿಗೆ ನಾವು ನೀಡುವ ದೊಡ್ಡ ಗೌರವ.
ಉಸ್ತಾದ್ ರವರ ಅಗಲಿಕೆಗೆ ಎರಡು ವರ್ಷ ತುಂಬಿದ್ದು ಆ ಪ್ರಯುಕ್ತ ಅವರ ಶಿಷ್ಯಂದಿರು ಅನುಸ್ಮರಣಾ ಕಾರ್ಯಕ್ರಮ ಸಂಘಟಿಸಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಿದ್ದಾರೆ.(ಲೇಖನ ಕೇಳಿದ್ದರು, ಆಗ ಅದೇನೋ ಬ್ಯುಝಿಯಾಗಿದ್ದರಿಂದ ಬರೆದು ಕೊಡಲಾಗಲಿಲ್ಲ ಎಂಬ ದುಃಖ ಈಗ ಈ ವಿನೀತನಲ್ಲಿದೆ.) ಇದೇ ಡಿಸಂಬರ್ 23 ರಂದು ದ.ಕ.ಜಿಲ್ಲಾ ಎಸ್ಕೆಎಸ್ಸೆಸೆಫ್ ಬೃಹತ್ ಅನುಸ್ಮರಣಾ ಕಾರ್ಯಕ್ರಮ ಸಂಘಟಿಸಿದೆ , ಮೌಲನಾ ಅಬ್ದುಲ್ ಅಝೀಝ್ ದಾರಿಮಿ ನೇತೃತ್ವದಲ್ಲಿ ಎಸ್.ವೈ.ಎಸ್.ವತಿಯಿಂದ ಆನ್ಲೈನ್ ಪ್ರೋಗ್ರಾಂ ಕೂಡ ನಡೆಯಲಿದೆ. ಈ ಕಾರ್ಯಕ್ರಮಗಳು ಯಶಸ್ವಿ ಯಾಗಲಿ.