ಅಝೀಝ್ ಅಶ್ಶಾಫೀ ಕೊಯ್ಯೂರು
ನಿಮಗೇ ಗೊತ್ತಿರಬಹುದು! ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ನೀವು ಓದಿರುತ್ತೀರಿ. ತೀರಾ ಅಸಹಾಯಕರಾಗಿ ಮುಂದಿನ ಜೀವನದ ಕುರಿತು ಏನೇನೂ ಯೋಜನೆಯಿಲ್ಲದೆ ಅಳುತ್ತಲೋ ಅಥವಾ ತಾನು ಒಮ್ಮೆಯೂ ನಿರೀಕ್ಷಿಸಿರದ ವೃತ್ತಿಯನ್ನು ಅಪ್ಪಿಕೊಂಡು ಬದುಕುವ ಹಲವಾರು ಬಡಜೀವಿಗಳ ಬವಣೆಗಳ ಜೀವನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟು ಅವರ ಕಷ್ಟಕ್ಕೆ ನೆರವಾಗುವ ಉದಾಹರಣೆಗಳನ್ನು ನಾವು ಇತ್ತೀಚೆಗೆ ನೋಡುತ್ತಾ ಬರುತ್ತಿದ್ದೇವೆ.
ತೀರಾ ಇತ್ತೀಚಿನ ಉದಾಹರಣೆ ದೆಹಲಿಯಲ್ಲಿ ನಡೆದ ಓರ್ವ ಬಡ ವೃದ್ಧನ ಬದುಕಿನ ಕಥೆ. ತನ್ನ ಮನೆಯಿಂದ ತಯಾರಿಸಿ ತಂದ ಅನ್ನ, ಪರೋಟ, ದಾಲ್ ಮಧ್ಯಾಹ್ನವಾದರೂ ಮೂರಂಕಿ ದಾಟದ ವ್ಯಾಪಾರದ ಕುರಿತು ಹೇಳುತ್ತಾ ಆ ಬಡ ವೃದ್ಧ ಅಳುವ ವೀಡಿಯೋ ಒಂದನ್ನು ಬ್ಲಾಗರ್ ಒಬ್ಬರು ಮೊಬೈಲ್ನಿಂದ ಚಿತ್ರಿಸಿ ವೈರಲ್ ಮಾಡಿದ್ದರು. ಕುತೂಹಲವೆಂಬಂತೆ ವಿಡಿಯೋ ನೋಡಿ ಇವರ ಡಾಬಾಕ್ಕೆ ಜನರ ದಂಡೇ ಹರಿದು ಬಂದ ಸುದ್ದಿಯನ್ನು ನಾವು ಓದಿಯಾಯಿತು.
ಕೆಲವು ದಿನಗಳ ಮೊದಲು ನಡೆದ ಇನ್ನೊಂದು ಸುದ್ದಿಯೂ ಇದೆ ರೀತಿಯದ್ದು. ಲಾಕ್ ಡೌನ್ ಬಿಸಿಯಲ್ಲಿ ಮದರಸ ಸಂಸ್ಥೆಗಳು ತೆರೆಯದೆ ತನ್ನ ಜೀವನದ ಮೂಲಾಧಾರವಾಗಿದ್ದ ವೇತನವು ರಜಾದಿನಗಳಲ್ಲಿ ಲಭ್ಯವಾಗದೇ ಹೋದಾಗ ಉಸ್ತಾದರೊಬ್ಬರು ರಸ್ತೆಬದಿ ಗೆಣಸು ಮಾರುವ ಮೂಲಕ ಸುದ್ದಿಯಾದರು. ಅವರ ಜೀವನಕ್ಕೂ ಸಹ ಸಾಮಾಜಿಕ ಜಾಲತಾಣ ಕಿವಿಯಾಯಿತು. ಬಳಿಕ ಅದು ಅವರ ಬದುಕಿನಲ್ಲಿ ಮುಖ್ಯ ತಿರುವೊಂದನ್ನು ನೀಡಿತು.
ಆದರೆ… ಫಲಿತಾಶವು ಸಕಾರಾತ್ಮಕವಾಗಬೇಕಾದರೆ ಯಾರಾದರೂ ಜಾಲತಾಣಗಳಲ್ಲಿ ಹರಿಯಬಿಟ್ಟರೆ ಮಾತ್ರವೇ? ತಮ್ಮ ತಮ್ಮ ಅಕ್ಕಪಕ್ಕದಲ್ಲೇ ಇರುವ ಸಾವಿರಾರು ಬಡ ನಿರ್ಗತಿಕರ ಬವಣೆಗಲೆಲ್ಲಾ ಇದರ ಹೊರತು ಯಾರಿಗೂ ಕಾಣದಾಗುವ ಪರಿಸ್ಥಿತಿಯನ್ನು ಏನನ್ನೋಣ? ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆಗಳು ಇನ್ನೂ ನೂರಾರಿವೆ. ಅದಿರಲಿ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕುತ್ತಾ ಹೋದರೆ ಈ ಬಡಪಾಯಿಗಳ ಅಥವಾ ಇವರಂತಿರುವ ಬೆಳಕಿಗೆ ಬಾರದ ಅಸಂಖ್ಯಾತ ಬಡಜೀವಿಗಳ ಕಷ್ಟಕ್ಕೆಲ್ಲಾ ಹೊಣೆಯಾರು. ಉತ್ತರ ಸ್ಪಷ್ಟ. ಅದು ನಾವೇ.
ಈ ಮೇಲಿನ ಎರಡು ಉದಾಹರಣೆಗಳನ್ನೇ ತೆಗೆದುಕೊಳ್ಳೋಣ. ಬೀದಿಬದಿ ವ್ಯಾಪಾರ ಮಾಡಿದ ಉಸ್ತಾದರ ಕುರಿತು ಹೇಳುವುದಾದರೆ, ಮೊದಲೇ ಮದರಸ ಶಿಕ್ಷಕರು ತಮ್ಮ ನೌಕರಿಯಲ್ಲಿ ಅತ್ಯಲ್ಪ ವೇತನಕ್ಕೆ ದುಡಿಯುವವರು. ಸಾಮಾನ್ಯರು ಸಹ ಅವರ ದುಪ್ಪಟ್ಟು ವೇತನದಲ್ಲಿ ಪ್ರತಿದಿನ ದುಡಿಯುತ್ತಾರೆ. ಹಾಗಿರುವಾಗ ಇದ್ದ ವೇತನವೇ ಕನಿಷ್ಠವಾಗಿದ್ದು ಈಗ ಯಾವುದೇ ಶಿಕ್ಷಣ ಸಂಸ್ಥೆಗಳಂತೆ ಮದರಸಗಳು ಮುಚ್ಚಿರುವ ಈ ಸಂಧಿಗ್ಧತೆಯಲ್ಲಿ ಅವರ ವೇತನವನ್ನು ನೀಡದೆ ಸತಾಯಿಸುವ ಸಮಿತಿಗಳೇ ಇದಕ್ಕೆ ನೇರಹೊಣೆ. ಆದರೆ ಅದು ವಿಷಯವಾಗದೆ ಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯ ಮಾಡಿ ಅದು ದೀರ್ಘಕಾಲದ ಸಮಸ್ಯೆಯಾಗದಂತೆ ಮಾಡುವಲ್ಲಿ ಆ ವೀಡಿಯೋ ಸಹ ವಿಫಲವಾಯಿತು ಅನ್ನುವುದು ಅನ್ನುವುದು ಒಳ್ಳೆಯ ಬೆಳವಣಿಗೆಯಾಗಲಾರದು.
ಇನ್ನು ವೃದ್ಧರ ಸ್ಥಿತಿಯೂ ಅಷ್ಟೇ. ಆ ಬಡ ದಂಪತಿಯ ಅಳು ಕ್ಯಾಮೆರಾದ ಕಣ್ಣುಗಳಲ್ಲಿ ಸೆರೆಯಾದಾಗ ಅವರಿಗೆ ಸದ್ಯಕ್ಕಂತೂ ಅದೃಷ್ಟ ಖುಲಾಯಿಸಿದೆ ಅನ್ನುತ್ತಾ ಸುಮ್ಮನಿರಬಹುದಷ್ಟೆ. ಏಕೆಂದರೆ ಗಕ್ಕನೆ ದೊರಕುವ ಯಶಸ್ಸು ದೀರ್ಘಕಾಲಿಕ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೆ. ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಬಡ ವ್ಯಾಪಾರಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸದೆ ಜಾಗ ಖಾಲಿ ಮಾಡಿಸುವ ಎಷ್ಟೋ ಸುದ್ದಿಗಳನ್ನು ನಾವು ಓದುತ್ತಿದ್ದೇವೆ. ಆದರೆ ಅವರ ಕಷ್ಟಗಳು ಯಾವುದೇ ಜಾಲತಾಣಗಳ ಕಿವಿಗೂ ಕೇಳುವುದಿಲ್ಲ. ಕೆಲವೊಂದು ಸಮಯದಲ್ಲಿ ಕಾಕತಾಳಿಯವೋ ಎಂಬಂತೆ ಅಲ್ಲೊಂದು ಇಲ್ಲೊಂದು ಘಟಿಸುವ ಇಂತಹ ಸಂಗತಿಗಳು ಒಳ್ಳೆಯದೇ ಆದರೂ ಅವರಂತಿರುವ ಎಷ್ಟೋ ಜನರಿಗೆ ದೀರ್ಘವಾದ ಅಥವಾ ಶಾಶ್ವತವಾದ ಪರಿಹಾರ ದೊರಕಿದರೆ ಆಗ ಮಾತ್ರ ಇವುಗಳಿಗೆ ಗೆಲುವಾಗಿದೆ ಅಂದುಕೊಳ್ಳಬಹುದು.