📝ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು
ಏನೋ ಬದಲಾವಣೆಯ ಸುವಾಸೆನೆಯೋ ವಾಸನೆಯೋ ಮೂಗಿಗೆ ಬಡಿಯುತ್ತಿದೆ. ಒಂದು ಕಾಲದಲ್ಲಿ ಚುನಾವಣೆ ಅಂದಾಕ್ಷಣ ಎಲ್ಲರ ನೆನಪಿನಲ್ಲಿ ಓಡುತಾತಿದ್ದ ಒಂದೇ ಒಂದು ಪಕ್ಷ ಕಾಂಗ್ರೇಸ್ ಆಗಿತ್ತು.
ಭಾರತೀಯರೆಲ್ಲಾ ಸ್ವಾಂತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವೆಂಬ ನಿಟ್ಟಿನಲ್ಲಿ ಹೃದಯದಿಂದಲೇ ಅಪ್ಪುತ್ತಿದ್ದರು. ಅಪ್ಪಿತಪ್ಪಿಯೂ ವಯೋವೃಧ್ಧರೂ ಸಹ ಕೈ ಹೊರತು ಬೇರಾವುದೇ ಚಿಹ್ನೆಗೆ ಅಚ್ಚೊತ್ತಿರಲಿಲ್ಲ.
ಬರುಬರುತ್ತಾ ರಾಯನ ಕುದುರೆ ಕತ್ತೆಯಾಯಿತು ಎಂಬಂತೆ ದಿನಗಳೆದೆಂತೆಲ್ಲಾ ಕೋಮುವಾದದ ಅಮಲೇರಿಸಿಕೊಂಡು ಇನ್ನೂ ಚಿಗುರಲೂ ಸಹ ಪರಿತಪಿಸುತ್ತಿದ್ದ ಕೋಮುವಾದಿ ಪಕ್ಷವನ್ನು ಹೆಮ್ಮರವಾಗಿ ಬೆಳೆಯಲು ಬಿಟ್ಟು ತನ್ನನ್ನೇ ನೆಲಕಚ್ಚುವಂತೆ ಮಾಡಿದ ಕಾಂಗ್ರೇಸ್ ಪಕ್ಷವು ಪಟ್ಟಣದ ನಡುವೆ ಇರುವ ಬಸ್‌ಸ್ಟ್ಯಾಂಡಿನಂತೆ ಆಗಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ನಂಬಿಕೊಂಡು ಬಂದ ಸಿಧ್ಧಾಂತವಿಲ್ಲ. ಹೊಸಬರನ್ನು ಮೇಲೆ ತರುವ ಉತ್ಸಾಹವಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸೃಷ್ಟಿಸುವ ಹುಮ್ಮಸ್ಸಿಲ್ಲ. ಹಳ್ಳಿಯ ಕಟ್ಟೆಕಡೆಯ ವೃಧ್ಧರ ಬಾಯಲ್ಲೂ ಸಹ ಮೇಳೈಸುತ್ತಿದ್ದ ಕಾಂಗ್ರೇಸ್ ಬಹುಜನರೆನ್ನುವಂತೆ ಮುಳುಗುತ್ತಿದೆಯೇನೋ ಅನ್ನುವಂತಿದೆ. ಆದ್ದರಿಂದಲೇ ಮೊದಲೇ ಹೇಳಿದಂತೆ ಕಂಡವರು ಬಂದು ಬಸ್‌ಸ್ಟಾಂಡಿನಲ್ಲಿ ಬಸ್ ಹತ್ತಿ ತಮ್ಮಿಚ್ಚೆಯಂತೆ ಇಳಿಯುತ್ತಲೇ ಹೋಗುತ್ತಿದ್ದಾರೆ.
ಅಂದಹಾಗೆ ಕಾಂಗ್ರೇಸ್ ಹೊರತಾದ ಪಕ್ಷಗಳನ್ನು ಅಪ್ಪಿಕೊಂಡವರು ಇತ್ತೀಚಿಗಷ್ಟೆ ಮತದಾನದ ಹಕ್ಕನ್ನು ಪಡೆದ ಯುವಜನತೆಯಲ್ಲ. ಹಳೆಯ ಪಕ್ಷದಲ್ಲಿದ್ದುಕೊಂಡೇ ಅಧಿಕಾರ ಅನುಭವಿಸಿ ಕೊನೆಗೆ ಮೂಲೆಗೆಸೆದು ಮಾಡಿದ ಪಾಪದ ಕೊಡವನ್ನು ಮುಚ್ಚಿಡಲು ಬೇರೆ ಪಕ್ಷ ಸೇರಿಕೊಂಡರು. ಆದರೆ ಯಾವುದೇ ಕೋಮುವಾದವನ್ನು ಬೆಂಬಲಿಸದೇ ನಾವು ಹಳೆಯವರೇ ಎನ್ನುವ ಬೆರಳೆಣಿಕೆಯ ಪ್ರಜೆಗಳ ಕೈಯಲ್ಲಿ ಕೈ ಚಿಹ್ನೆ ಇನ್ನೂ ಉಸಿರು ಬಿಗಿಹಿಡಿಯುತ್ತಾ ನೆಲಕ್ಕೆ ಬೀಳದೆ ಒದ್ದಾಡುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಸ್ವಲ್ಪ ಮನಸ್ಸು ಮಾಡಿರುತ್ತಿದ್ದರೆ ಹಲವು ವಾರ್ಡ್‌ಗಳನ್ನು ತನ್ನ ತೆಕ್ಕೆಗೆ ಪಡೆಯುವ ಅವಕಾಶವಿತ್ತು. ಆದರೆ ತಳಮಟ್ಟದ ಕಾಂಗ್ರೇಸಿನ ನಾಯಕರೆನಿಸಿಕೊಂಡ ಹಲವರ ಹಠಮಾರಿ ಧೋರಣೆಯಿಂದ ಮತಗಳು ವಿಭಜನೆಗೊಂಡು ಹಲವು ವಾರ್ಡ್‌ಗಳು ಅನಾಯಸವಾಗಿ ಬಿಜೆಪಿಯ ತೆಕ್ಕೆಗೆ ಜಾರಿದವು. ನಮ್ಮ ಕಣ್ಣಮುಂದೆಯೇ ಉದಯಿಸಿದ ಎಸ್.ಡಿ.ಪಿ.ಐ ಪಕ್ಷವು ಬರುಬರುತ್ತಾ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾ ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ರಾಜಕೀಯ ಅನ್ನುವುದು ನಿಂತ ನೀರಲ್ಲವಲ್ಲ. ಕಾಂಗ್ರೇಸ್ಸಿನ ಇಬ್ಬಗೆಯ ನೀತಿಯಿಂದ ಬೇಸತ್ತು ಹೊಸದಾರಿ ಕಂಡುಕೊಂಡ ಕಾಂಗ್ರೇಸ್ಸಿನ ಕಾರ್ಯಕರ್ತರೇ ಇಂದು ಎಸ್.ಡಿ.ಪಿ.ಐ ಪಕ್ಷವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಅಭಿವೃಧ್ಧಿಯ ಮೂಲಕ ಬದಲಾವಣೆಯನ್ನು ಜನರು ಅರಿತುಕೊಳ್ಳುತ್ತಿದ್ದಾರೆ. ಪಂಚಾಯತ್ತಿನ ಸಭೆಗಳಲ್ಲಿ ನಿರರ್ಗಳವಾಗಿ ಮಾತಾಡುತ್ತಾ ಹಕ್ಕನ್ನು ಪಡೆಯುವ ಅವರ ಉತ್ಸಾಹ ಮತ್ತು ಜವಾಬ್ದಾರಿ ಅದರತ್ತ ಯುವಜನರ ಒಲವು ಮೂಡುವಂತೆ ಮಾಡುತ್ತಿದೆ. ಆದರೆ ಈ ಪಕ್ಷದಿಂದ ಕೆಲವೊಂದು ಕಡೆ ಕೇಳಿಬರುವಂತೆ ಸಮುದಾಯದ ರಕ್ಷಣೆ ಅನ್ನುವ ವಿಲುವಿನಿಂದ ಹೊರಬಂದು ಪ್ರಜೆಗಳ ರಕ್ಷಣೆ ಅನ್ನುವುದನ್ನು ಧ್ಯೇಯವನ್ನಾಗಿ ಮಾಡಿದರೆ ಒಳಿತು ಅನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.
ಅದೇನೇ ಆದರೂ ಇನ್ನೂ ಕಾಂಗ್ರೆಸ್ಸಿನಲ್ಲುಳಿದ ಹಲವು ಸಾಮಾನ್ಯವರ್ಗ ಎಂದಿಗೂ ಧ್ವೇಷ ರಾಜಕಾರಣವನ್ನು ಸಹಿಸದ ಕಾರಣದಿಂದಲೇ ಆಗಿದೆ. ಒಂದು ಸಮುದಾಯವನ್ನು ನಿರ್ಮೂಲನೆ ಮಾಡುವುದೇ ಗುರಿಯನ್ನಾಗಿಸಿಕೊಂಡಿರುವ ಅಥವಾ ಮುಸ್ಲಿಂ ಧ್ವೇಷವನ್ನೇ ರಾಜಕೀಯ ಮಾಡಿಕೊಂಡಿರುವ ಕೋಮುವಾದಿಗಳನ್ನು ಸಹಿಸದ ಕಾರಣ ಮಾತ್ರವೇ ಕಾಂಗ್ರೇಸ್ಸಿನಲ್ಲಿ ಉಳಿದುಕೊಂಡಿರುವ ಲಕ್ಷಾಂತರ ಮಂದಿಯ ಧ್ಯೇಯವಾಗಿದೆ. ಅದೂ ಸಿದ್ದರಾಮಯ್ಯರಂಥ ಜನಪರ ರಾಜಕಾರಣಿಗಳು ಇನ್ನೂ ಅಲ್ಲಿ ಬದುಕಿರುವುದರಿಂದ ಮಾತ್ರ ಅನ್ನುವ ಮಾತುಗಳೇ ಜನಸಾಮಾನ್ಯರ ಬಾಯಿಂದ ಕೇಳಿಬರುತ್ತಿದೆ. ಆದರೆ ಅಲ್ಲೂ ಭರವಸೆಯ ಎಲ್ಲಾ ಬಾಗಿಲುಗಳು ಮುಚ್ಚುತ್ತಿದ್ದು ದೃಢವಾದ ಪ್ರಜಾಪ್ರಭುತ್ವ ಪರ ಸಿಧ್ಧಾಂತವನ್ನು ಹೊಂದಿರುವ ಪಕ್ಷಗಳತ್ತ ಮುಖ ಮಾಡುವುದೇ ಕೊನೆಯ ದಾರಿಯಾಗಿ ನಮ್ಮ ಮುಂದಿದೆ. ಅದರ ಅವಕಾಶಗಳು ನಮ್ಮನ್ನು ಹೊಸದರತ್ತ ದೂಡುತ್ತಿರುವುದು ಅಲ್ಲಗಳೆಯಲಾಗದ ಸತ್ಯ. ಕಟ್ಟಿಹಾಕುವ ಪ್ರಯತ್ನದ ಮೇಲೆ ಕಾಂಗ್ರೆಸ್ ಪಕ್ಷದ ಭವಿಷ್ಯ ನಿಂತಿದೆ.