Home ಅಂಕಣಗಳು “ಪಪ್ಪು” ರಾಹುಲ್ ಗಾಂಧಿಯ ಪ್ರಬುಧ್ಧತೆಯನ್ನು ಬಾಲಿಶಗೊಳಿಸುವ ಹತಾಶೆಯ ಪ್ರಯತ್ನ

“ಪಪ್ಪು” ರಾಹುಲ್ ಗಾಂಧಿಯ ಪ್ರಬುಧ್ಧತೆಯನ್ನು ಬಾಲಿಶಗೊಳಿಸುವ ಹತಾಶೆಯ ಪ್ರಯತ್ನ

ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು

“ನಿಮಗೆ ನನ್ನ ಮೇಲೆ ಧ್ವೇಷವಿರಬಹುದು, ನಿಮ್ಮ ಮನಸ್ಸಲ್ಲಿ ನನ್ನನ್ನು ನುಂಗಿಬಿಡುವ ಕೋಪವಿರಬಹುದು, ನೀವು ನನ್ನನ್ನು ವಿಭಿನ್ನವಾಗಿ ನಿಂದಿಸಬಹುದು. ನಿಮ್ಮೊಳಗೆ ನಾನೊಬ್ಬ ಪಪ್ಪು ಆಗಿರಬಹುದು. ಆದರೆ ನನ್ನೊಳಗೆ ನಿಮ್ಮ ಕುರಿತು ಇಷ್ಟೇ ಇಷ್ಟು ಕೋಪವಾಗಲಿ ಧ್ವೇಷವಾಗಲಿ ನಿಂದನೆಯಾಗಲಿ ಇಲ್ಲವೇ ಇಲ್ಲ” ಇದು ಉಕ್ಕಿನ ಮಹಿಳೆ ಇಂದಿರಾರ ಮೊಮ್ಮಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೊಮ್ಮೆ ಲೋಕಸಭೆಯಲ್ಲಿ ಬಿಜೆಪಿಯ ವಿರುಧ್ಧ ಘರ್ಜಿಸಿದ ಮಾತು.

ಈ ಮಾತು ಕೇಳುತ್ತಲೇ ಅಲ್ಪ ವಿವೇಕದಿಂದ ಗಮನಿಸಿದಾಗ ರಾಹುಲ್ ಗಾಂಧಿಯ ಮಾತುಗಳಲ್ಲಿ ಇರುವ ಪ್ರಬುಧ್ಧತೆ ಎದ್ದು ಕಾಣುತ್ತದೆ. ಐಷಾರಾಮಿ ಸುಖದಲ್ಲಿಯೇ ಬೆಳೆದು ಆದರೆ ತನ್ನ ಹಿರಿಯರು ಕಂಡುಕೊಂಡ ರಾಷ್ಟ್ರಪ್ರೇಮದ ದಾರಿಯಲ್ಲಿಯೇ ಮುಂದುವರಿಯುತ್ತಿರುವ ರಾಹುಲ್ ಗಾಂಧಿಯನ್ನು “ಪಪ್ಪು” ಎನ್ನುವ ಪದ ಬಳಸಿ ಆಡಳಿತಕ್ಕೆ ಬಾರದವನು ಎಂದು ಭಾರತದ ಜನರ ಮಾನಸದಿಂದ ಅಳಿಸಿ ಹಾಕುವ ಒಂದು ವಿಭಾಗದ ಜನರ ಪ್ರಯತ್ನವನ್ನು ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ನಾವು ಕಂಡಿದ್ದೇವೆ. ಅಲ್ಲದೇ ಈಗಲೂ ಮುಂದುವರಿಯುತ್ತಲೂ ಇದೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ರಾಹುಲ್ ಪ್ರಬುಧ್ಧವಾಗಿ ಮಾತನಾಡುತ್ತಾರೆ. ಮೋದಿಯ ಫುಟ್‌ಪಾತ್ ಟೀ ಕಥೆಯು ವ್ಯಾಪಕ ಪ್ರಚಾರ ಪಡೆಯುತ್ತಲೇ ಐಷಾರಾಮಿ ರಾಹುಲ್ ಜನಸಾಮಾನ್ಯರ ನಡುವೆ ಅನಾಯಾಸವಾಗಿ ನಡೆದುಬಿಡುತ್ತಾರೆ. ಹೀಗೆ ಪ್ರತಿ ಹಂತದಲ್ಲೂ ಪ್ರಬುಧ್ಧತೆ ಮೆರೆಯುವ ರಾಹುಲ್ ಗಾಂಧಿಯನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬಾರದು. ಹೀಗೇನಾದರೂ ಬೆಳೆಯಲು ಬಿಟ್ಟರೆ ನಮ್ಮ ಬೇಳೆ ಇಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಂಡೇ ಆ ಪಕ್ಷದವರು ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆಯುತ್ತಾ ಜನರ ನಡುವೆ ಬಾಲಿಶವಾಗಿ ಬಿಂಬಿಸಿದರು. ರಾಹುಲ್ ಗಾಂಧಿಯ ಪ್ರತಿ ಭಾಷಣದ ತುಣುಕುಗಳನ್ನು ಹಿಡಿದುಕೊಂಡು ಅದಕ್ಕೆ ಬೇರೆಯದೇ ಅರ್ಥವನ್ನು ಸಂಕಲ್ಪಿಸಿ ಜನರ ನಡುವೆ ಬಿತ್ತಿ ಯಶಸ್ವಿಯಾದರು. ಅದಕ್ಕೆ ಅತಿದೊಡ್ಡ ಉದಾಹರಣೆಯೆಂದರೆ ಆಲೂಗಡ್ಡೆಯನ್ನು ಮಿಷನ್ ಗೆ ಹಾಕಿ ಅದರಿಂದ ಚಿನ್ನ ತೆಗೆಯುವ ರಾಹುಲ್ ಗಾಂಧಿಯ ಭಾಷಣದ ಒಂದು ತುಣುಕು. ಆದರೆ ರಾಹುಲ್ ಹೇಳಿದ್ದು ಮೋದಿ ಆಲೂಗಡ್ಡೆಯನ್ನು ಮಿಷನ್ ಗೆ ಹಾಕಿ ಚಿನ್ನ ತೆಗೆಯುವ ಸುಂದರ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎನ್ನುವುದಾಗಿತ್ತು.

ಅದು ಮಾತ್ರವಲ್ಲದೆ ಬಿಜೆಪಿಯ ರಣತಂತ್ರದ ಮುಂದೆ ಖುದ್ದು ಕಾಂಗ್ರೆಸ್ ನಾಯಕರ ಅವಿವೇಕತನದ ವರ್ತನೆಯೇ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯ ಪ್ರಬುದ್ಧತೆ ಮರೆಮಾಚಲು ಇನ್ನೊಂದು ಪ್ರಮುಖ ಕಾರಣವಾಯಿತು. ಕಾಂಗ್ರೆಸ್ಸಿನ ನಾಯಕರೇ ಪಪ್ಪು ಎಂಬ ಪದವನ್ನು ಸ್ವತಃ ಸರಿಯೆಂದು ಭಾವಿಸಿದರು. ಮೋದಿ ಜಾರಿಗೆ ತಂದ ನೋಟ್ ಬ್ಯಾನ್ ಸಂದರ್ಭದ ಕುರಿತು ರಾಹುಲ್ ಹೇಳಿದ ದೂರದೃಷ್ಟಿಯ ಹೇಳಿಕೆಗಳಲ್ಲಿ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿಯ ಪ್ರಬುದ್ಧತೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇದು ಕೈ ನಾಯಕರ ಅಪ್ರಬುದ್ಧತೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಅಥವಾ ಎಲ್ಲಾ ಗೊತ್ತಿದ್ದು ನಾಟಕವಾಡುತ್ತಿರಬಹುದು.

ಚುನಾವಣೆ ಸಂದರ್ಭಗಳಲ್ಲೆಲ್ಲಾ ಆಡಳಿತ ಪಕ್ಷವು ಪುಕ್ಕಟೆ ಅಭಿವೃದ್ಧಿ ಮಂತ್ರ ಘೋಷಿಸುತ್ತಲೇ ರಾಹುಲ್ ಗಾಂಧಿಯೂ ಸಹ ವಿಪಕ್ಷವನ್ನು ಕೋಮುವಾದಿಯೆಂದು ಬೈಯುತ್ತಲೇ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಅವರು “ರಾಹುಲ್ ಬಚ್ಚಾ ಹೇ, ಬೋಲ್ತಾ ಹೈ ಖೆಲ್ನೇ ಛೋಡ್ ದೋನಾ” ಅಂತ ಟಾಂಗು ಕೊಟ್ಟು ಸುಮ್ಮನಾಗಿಬಿಡುತ್ತಿದ್ದರು. ಇದು ರಾಹುಲ್ ಗಾಂಧಿಯನ್ನು ಡಮ್ಮಿ ಮಾಡುವ ಮಹಾಸಂಚಿನ ಭಾಗವಾಗಿತ್ತು. ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿತು. ಕೈ ಯುವರಾಜ ರಾಹುಲ್ ಗಾಂಧಿ ತೀವ್ರ ಮುಖಭಂಗ ಅನುಭವಿಸಿದರು.

ಕೈ ನಾಯಕರೆಲ್ಲ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅನ್ನುತ್ತಾ 60 ವರ್ಷಗಳಲ್ಲಿ ತಿಂದಿದ್ದ ತೇಗನ್ನು ಬಿಟ್ಟು ಸುಮ್ಮನಾಗಿಬಿಟ್ಟರು. ಮೋದಿ ಅಭಿವೃದ್ಧಿ ಮಂತ್ರದ ಭಾಷಣದುದ್ದಕ್ಕೂ ಕಾಂಗ್ರೆಸ್ 60 ವರ್ಷಗಳಿಂದ ಭಾರತವನ್ನು ತಟಸ್ಥಗೊಳಿಸಿದೆ. ಯಾವುದೇ ಅಭಿವೃದ್ಧಿಯಾಗಿಲ್ಲ ತಾನು ಐದು ವರ್ಷಗಳಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎನ್ನುತ್ತಲೇ ಅಧಿಕಾರಕ್ಕೆ ಬಂದು ಬಿಟ್ಟರು. ಕೆಲಸ ಮಾಡದೆಯೂ ಹೇಗೆ ಅಧಿಕಾರದಲ್ಲಿ ಇರಬೇಕು ಎನ್ನುವುದನ್ನು ಮತ್ತು ಜನರ ಮಾನಸದಲ್ಲಿ ಹೇಗೆ ನೆಲೆಸಬೇಕು ಎನ್ನುವುದರ ಕುರಿತ ತಂತ್ರಗಾರಿಕೆ ಅವರಿಗೆ ಕರಗತವಾಗಿದೆ. ಆದರೆ ಮನಮೋಹನ್ ಸಿಂಗ್ ಮಾತೇ ಆಡಲಿಲ್ಲ ಕೆಲಸವನ್ನು ಮಾಡುತ್ತಲೇ ಆರ್ಥಿಕ ಸಂಕಷ್ಟದಲ್ಲಿ ಬಳಲಬೇಕಾಗಿದ್ದ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದರು. ಆದರೆ ಇದ್ಯಾವುದೂ ಜನರಿಗೆ ಅರ್ಥವಾಗಲಿಲ್ಲ. ಕಾಂಗ್ರೆಸ್ ಚುನಾವಣೆಗಳಲ್ಲಿ ಯಥಾಪ್ರಕಾರ ರಾಜ ಗಾಂಭೀರ್ಯದೊಂದಿಗೆ ಯುದ್ಧಕ್ಕಿಳಿಯಿತು. ಅದು ಕಾಂಗ್ರೆಸ್ಸಿನ ಸಿದ್ಧಾಂತವು ಹೌದು ನಡೆದು ಬಂದ ರೀತಿಯೂ ಹೌದು.ಆದರೆ ಆ ಪಕ್ಷದ ಬಗ್ಗೆ ಎರಡು ಮಾತಿಲ್ಲ. ಆದರೆ ರಾಹುಲ್ ಗಾಂಧಿಯ ಮೇಲೆ ಏನೆಲ್ಲಾ ಅಪಪ್ರಚಾರ ಮಾಡಿದರೂ ರಾಹುಲ್ ಅದನ್ನೆಲ್ಲ ಮೆಟ್ಟಿ ನಿಲ್ಲುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಅವರು ನಿಜವಾದ ಪಪ್ಪು ಅಲ್ಲ ಬಿಜೆಪಿಯ ಫೇಕ್ ಫ್ಯಾಕ್ಟರಿಯಿಂದ ರೂಪಿಸಿದ ಪಪ್ಪು. ನಕಲಿಗಳಿಗೆ ವ್ಯಾಲಿಡಿಟಿ ಕಡಿಮೆ ಅಸಲಿ ಒಂದೇ ಶಾಶ್ವತವಾಗಿ ಉಳಿದು ಬಿಡುತ್ತದೆ.

(ಕೃಪೆ: ರಾ ಚಿಂತನ್ ವೀಡಿಯೋ ವರದಿ)

Previous articleಅಮ್ಮಾ…..ನಾನು ಶ್ರೀಮಂತನೇ ಹೊರತು, ನನ್ನ ಹೃದಯವಲ್ಲ…
Next articleಪಾರ್ಶ್ವವಾಯು ಪೀಡಿತ ರೋಗಿಯನ್ನು ಊರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್.

LEAVE A REPLY

Please enter your comment!
Please enter your name here