📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು.
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಕುವೆಂಪುರವರ ಈ ಸಾಲುಗಳನ್ನ ನೀವು ಕರ್ನಾಟಕದಲ್ಲಿ ಹುಟ್ಟಿದವರಾದರೆ ಕೇಳಿಯೇ ಇರುತ್ತೀರಿ. ಮುಖ್ಯವಾಗಿ ಕರುನಾಡಿನ ಬಹುಪಾಲು ಜನರು ಕಲಿತ ಸರ್ಕಾರಿ ಶಾಲೆಯಲ್ಲಿ ಇಂದಿಗೂ ಪುಟ್ಟ ನಿಷ್ಕಳಂಕ ವಿದ್ಯಾರ್ಥಿಗಳ ಬಾಯಲ್ಲಿ ಈ ನುಡಿಗಳು ಪ್ರತಿದಿನದ ಶಾಲಾರಂಭದ ಹೊತ್ತಿನಲ್ಲಿ ಹೇಳಿಸುವ ಪರಿಪಾಠ ಇಂದಿಗೂ ಮುಂದುವರೆದಿದೆ.
ಕುವೆಂಪುರವರ ನಾಡಗೀತೆಯ ಸಾಲನ್ನು ಉಲ್ಲೇಖಿಸಿ ಕೆಲವು ನನ್ನ ಅನಿಸಿಕೆಗಳನ್ನಷ್ಟೇ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಯಾಕೆ ಈ ವಿಷಯವನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆಂದರೆ ಎರಡುದಿನಗಳ ಹಿಂದಷ್ಟೇ ಕೊಕ್ಕಡದ ಸರ್ಕಾರಿ ಶಾಲೆಯೊಂದರ ಮಕ್ಕಳು ಸ್ಥಳೀಯ ಮಸೀದಿಯ ಉದ್ಘಾಟನೆಯ ಸಮಾರಂಭಕ್ಕೆ ಭೇಟಿಯಿತ್ತ ವಿಷಯ ವಿವಾದವಾದಾಗ ಇದರ ಬಗ್ಗೆ ಬೇಡವೆಂದರೂ ಬರೆಯದಿರಲು ಮನಸ್ಸು ಕೇಳಲಿಲ್ಲ.
ಮೊದಲನೆಯದಾಗಿ ನಾನು ಮೇಲೆ ಉಲ್ಲೇಖಿಸಿದ ಕುವೆಂಪುರವರ ಸಾಲುಗಳನ್ನ ತೆಗೆದುಕೊಳ್ಳೋಣ. ಮುಖ್ಯವಾಗಿ ಸರ್ಕಾರಿ ಶಾಲೆಗಳನ್ನ ನಾವು “ಮಿನಿಭಾರತ” ಎಂದು ಕರೆಯುತ್ತೇವೆ. ಖಾಸಗಿ ಶಾಲೆಯಂತೆ ಉಳ್ಳವರ ಅಧಿಕಾರಸ್ತರ ಮಕ್ಕಳಿಗೆ ಮಾತ್ರ ಸೀಮಿತಗೊಳ್ಳದೇ ಕಡುಬಡವ,ಶ್ರೀಮಂತ ಮತ್ತು ಜಾತ್ಯಾತೀತವಾಗಿ ವಿವಿಧ ಸ್ತರದ ಮಕ್ಕಳು ಬೆರೆತು ಕುಳಿತು ಕಲಿಯುವುದರಿಂದಲೇ ಇದನ್ನು ಮಿನಿಭಾರತ ಎನ್ನುತ್ತೇವೆ. ಶಾಲೆಗಳಾದಾಗ ಮುಖ್ಯವಾಗಿ ಮಕ್ಕಳು ಶಿಕ್ಷಕರಿಂದ ಸರ್ವಧರ್ಮ ಸಹಿಷ್ಣುತೆಯ ಪಾಠಗಳನ್ನ ಕೇಳುತ್ತಲೇ ಬೆಳೆಯುತ್ತಾರೆ.
ಧರ್ಮಗಳ ಮಧ್ಯೆ ಹಗೆತನ ಸಾಧಿಸದೇ ಕೂಡಿಬಾಳುವ ಸಹಬಾಳ್ವೆಯ ತಿರುಳು ಮಕ್ಕಳಿಗೆ ಮನದಟ್ಟು ಮಾಡುವುದರಿಂದಲೇ ಮುಂದೇ ಮುಗ್ಧತೆ ವಿಕಸನಗೊಂಡು ಪ್ರೌಢಾವಸ್ಥೆಯೋ ಯೌವ್ವನವೋ ಅಥವಾ ವಯಸ್ಸಾದಂತೆಲ್ಲಾ ಇತರ ಕೋಮುವಾದದ ಗಾಳಿ ನಡುವೆ ಬೀಸದಿದ್ದರೆ ಮಕ್ಕಳು ಸದ್ಗುಣವಂತ ಪ್ರಜೆಯಾಗಿಯೇ ಬಾಳುತ್ತಾರೆ ಎನ್ನುವುದು ನಿಸ್ಸಂಶಯ.
ಆದರೆ ಕೊಕ್ಕಡದಲ್ಲಿ ನಡೆದ ಪ್ರಹಸನವನ್ನೊಮ್ಮೆ ನೋಡಿ. ಸರ್ವಧರ್ಮದ ಕುರಿತು ಕಲಿತ ಪಾಠವು ಕೇವಲ ಪುಸ್ತಕದ ನಿವೇದನೆಯಿಂದಲೂ ಸ್ವಲ್ಪ ಮುಂದಕ್ಕೆ ಸಾಗಿ ಅದರ ಪ್ರಾಯೋಗಿಕ ಚಲನೆ ಹೇಗೆ ಎಂಬುದನ್ನು ಮಕ್ಕಳು ಮಸೀದಿಗೆ ತೆರಳಿದಾಗ ಜಗದಗಲ ಅದು ಉದಾಹರಣೆಯಾಗಬೇಕೀತ್ತು. ಆದರೆ ಇಲ್ಲಿ ಇದಕ್ಕೆ ತೀರಾ ವಿಪರೀತವಾಗಿ ಅದೊಂದು ಸಾಮೂಹಿಕ ದ್ರೋಹವಾಗಿ ಪರಿಗಣಿತವಾಗಿ ಇಂದು ಏನೋ ಆಕಾಶವೇ ಕಳಚಿ ಬಿದ್ದಂತೆ ಚೀರಾಡುತ್ತಿರುವ ವಿಕಾರ ಮನಸ್ಸುಗಳನ್ನ ನಾವು ಕಾಣುತ್ತಿದ್ದೇವೆ. ಧರ್ಮಗಳ ನಡುವೆ ಧ್ವೇಷಬೀಜ ಬಿತ್ತುವ ಅವಕಾಶವನ್ನೇ ಸದಾ ಕಾಯುವ ಕೆಲವು ಪೂರ್ವಗ್ರಹಪೀಡಿತ ವ್ಯಕ್ತಿಗಳು ಸಂಭವ ನಡೆದ ಅದೇ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕರೆಮಾಡಿ ನೀವೇನೋ ಶಿಕ್ಷಣ ವ್ಯವಸ್ಥೆಗೆ ದ್ರೋಹವೆಸಗಿದಂತೆ ಮಾಡಿದ್ದೀರಿ ಅನ್ನುವ ರೀತಿಯಲ್ಲಿ ಘಟನೆಯನ್ನು ಬಿಂಬಿಸಿದ್ದಾರೆ. ಶಿಕ್ಷರಾದರೋ ಅವರ ವಾದವೇ ಸರಿಯೆನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿ ಅವನಿಂದ ಶಹಬ್ಬಾಷ್‌ಗಿರಿ ಪಡೆಯುವಂತೆ ವರ್ತಿಸಿದ್ದು ಸಹ ಕಳವಳಕಾರಿಯಾದ ಸಂಗತಿಯಾಗಿದೆ.
ಕಲಿಸುವ ಗುರುಗಳಿಗೂ ಸಹ ತನ್ನ ಕರ್ತವ್ಯವೇನೂ ಅನ್ನುವ ಸಂಪೂರ್ಣ ಅರಿವಿದ್ದಂತಿಲ್ಲ. ಶಾಲೆ ಆರಂಭವಾದೊಡನೆ “ಸರ್ವ ಜನಾಂಗದ ಶಾಂತಿಯ ತೋಟ” ಮಂತ್ರವನ್ನು ವಿದ್ಯಾರ್ಥಿಗಳ ಬಾಯಲ್ಲಿ ಹೇಳಿಸುವ ಮತ್ತು ಸ್ವತಃ ಹೇಳುತ್ತಲೂ ಅದು ಹೇಗೆ ಪ್ರಾಯೋಗಿಕವಾಗಿ ದೃಢೀಕರಿಸಬೇಕು ಎಂಬುದನ್ನು ಸ್ವತಃ ಶಿಕ್ಷಕರೇ ಮರೆತಂತಿದೆ. ಅಂದರೆ “ಹಿಂದೂ ಕ್ರೈಸ್ತ ಮುಸಲ್ಮಾನ,ಪಾರಸಿಕ ಜೈನರುದ್ಯಾನ” ಎಂಬುವುದು ಕೇವಲ ಹೇಳಿಕೆಗಷ್ಟೇ ಪ್ರಾಯೋಗಿಕವಾಗಿ ಇಲ್ಲಿ ಸಲ್ಲುವುದಿಲ್ಲ ಎಂದಷ್ಟೇ ಇದರಿಂದ ತಿಳಿದುಬರುವ ಸತ್ಯವೆಂದರೆ ಅತಿಶಯೋಕ್ತಿಯಲ್ಲ.
ಇದನ್ನೆಲ್ಲಾ ನೋಡುವಾಗ ನಮ್ಮ ಕೊಯ್ಯೂರಿನಲ್ಲಿ ನಡೆದ ಒಂದು ಘಟನೆಯು ನೆನಪಿಗೆ ಬಂತು. ನಾಡಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ಸ್ಥಳೀಯ ಹಿಂದೂ ಬಾಂಧವರೊಬ್ಬರ ಗೃಹಪ್ರವೇಶಕ್ಕೆ ಆಹ್ವಾನವಿತ್ತು. ಶುಕ್ರವಾರದ ನಮಾಝ್ ಮುಗಿಸಿದ ಬಹುಪಾಲು ಜನರು ಗೃಹಪ್ರವೇಶಕ್ಕೆ ತೆರಳಿ ಅನ್ಯೋನ್ಯವಾಗಿ ಹಿಂದೂ ಬಾಂಧವರೊಂದಿಗೆ ಕುಳಿತು ಅನ್ನಭೋಜನ ಸೇವಿಸಿ ಮನೆಯೊಳಗೆ ಪ್ರವೇಶಿಸಿ ಆಶಿರ್ವದಿಸಿ ಬಂದ ಘಟನೆಯ ಇನ್ನೊಂದು ಪರ್ಯಾಯವಷ್ಟೇ ಕೊಕ್ಕಡ ಶಾಲೆಯ ಘಟನೆ.
ಕೊನೆಯದಾಗಿ ಹೇಳುವುದಿಷ್ಟೇ. ಕೊಕ್ಕಡದಲ್ಲಿ ಏನು ಘಟನೆ ನಡೆದಿದೆ ಅದು ವಾಸ್ತವವಾಗಿ ಸರಿಯೆಂಬ ವಾದವನ್ನೇ ಮುನ್ನೆಲೆಗೆ ತರದ ಹೊರತು ಇಲ್ಲಿ ಸರ್ವಧರ್ಮ ಸಹಿಷ್ಣುತೆ ನೆಲೆಯೂರದು. ಏಕೆಂದರೆ ಅಲ್ಲಿನ ಶಾಲೆಯ ಅಷ್ಟೂ ಮಕ್ಕಳಲ್ಲಿ ಎಳೆಯಲ್ಲಿಯೇ ಇತರ ಧರ್ಮಗಳ ಆಚರಣೆಗಳಲ್ಲಿ ಭಾಗಿಯಾಗುವುದು ಮಹಾಪ್ರಮಾದ ಎಂಬ ಸಂದೇಶವಷ್ಟೇ ಈ ಘಟನೆಯಿಂದ ಮೂಡಬಲ್ಲದು. ಅದರ ಹೊರತು ಬೇರಾವುದೇ ಸಂಗತಿಯನ್ನು ಇಲ್ಲಿ ಊಹಿಸಲು ಸಾಧ್ಯವಾಗದು. ಇನ್ನು ಸರ್ಕಾರಿ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಈ ಬೆಳವಣಿಗೆ ಸರಿಯಲ್ಲವೆಂದಾದರೆ ಸರ್ಕಾರಿ ಬಸ್ಸುಗಳಲ್ಲಿ, ಕಛೇರಿಗಳಲ್ಲಿ ದೇವರ ಚಿತ್ರಗಳು ಹೇಗೆ ಸರಿಯಾಗುತ್ತದೆ? ಇದಕ್ಕೆ ಉತ್ತರಿಸಬೇಕು.
ಮೊದಲೇ ಕೊಮುವಾದವು ಆಕಾಶವನ್ನು ಮುಟ್ಟಲಷ್ಟೇ ಬಾಕಿಯಿರುವ ನಮ್ಮ ನಡುವೆ ಕೊಕ್ಕಡ ಶಾಲೆಯ ಪ್ರಸಂಗವು ಅದಕ್ಕೆ ಇನ್ನೊಂದು ಮೆಟ್ಟಿಲಷ್ಟೇ ಅನ್ನುವುದನ್ನ ಅರ್ಥ ಮಾಡಿಕೊಳ್ಳಬಹುದು. ಕೊಕ್ಕಡ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕವೃಂದದ ಮೇಲೆಯೇ ಈ ಬೆಳವಣಿಗೆಯನ್ನು ತುರ್ತಾಗಿ ಅರ್ಥೈಸಿ ತಮ್ಮ ಊರಲ್ಲಿ ಎಂದೆಂದಿಗೂ ನೆಲೆಯೂರಿರುವ ಸರ್ವಧರ್ಮ ಸಹಬಾಳ್ವೆಯನ್ನು ಮುಂದೆಯೂ ತೊಡಕಾಗದಂತೆ ಮುಂದಕ್ಕೊಯ್ಯುವ ಅತಿ ಮಹತ್ತರ ಜವಾಬ್ದಾರಿಯಿದೆ.