ಹೌದು. ಬಾಯಿತಪ್ಪಿ ಅಂದಿಲ್ಲ. ದಿನಬೆಳಗಾದರೆ ನಿಮ್ಮ ಮೌಲ್ಯಗಳು ನಮ್ಮಿಂದ ದಿನಗಳೆದಂತೆ ದೂರವೇ ಹೋಗುತ್ತಿದೆ. ನೀವು ಕಂಡ ಕನಸುಗಳು ನಮಗೆ ಹಿಡಿಸುತ್ತಿಲ್ಲ. ನೀವು ಅದೇನನ್ನು ಬಯಸಿ ಬಡ ಭಾರತದ ಮೂಲೆಮೂಲೆಗೆ ಸಂಚರಿಸುತ್ತಿದ್ದಿರೋ ಅದು ನಮಗ್ಯಕೋ ಇರಿಸು ಮುರಿಸು ಮಾಡಿದೆ. ನೀವು ಅಂದಿರಿ ದೇಶದ ಆತ್ಮ ಗ್ರಾಮದಲ್ಲಿ ಅಡಗಿದೆಯೆಂದು. ಆದರೆ ಹಳ್ಳಿಗಳೇ ಭಾರತದ ಉದ್ದಕ್ಕೂ ಆಗಿ ಅದರ ಆತ್ಮ ಕೊಳಚೆಗೆ ಬಿದ್ದು ನರಳಾಡುತ್ತಿದೆ.
ನೀವು ಸಂಕಲ್ಪಿಸಿಸಿದ ಭಾರತದಲ್ಲಿ ಯಾರಿಗೂ ಭವಿಷ್ಯವಿಲ್ಲ. ನೀವು ನಿಮ್ಮ ಸಂಗಡಿಗರು ಅನ್ನಪಾನ ತ್ಯಜಿಸಿ ಬರಿಗಾಲಲ್ಲಿ ನಡೆದು ಎದ್ದುಬಿದ್ದು ಎತ್ತಿದ ಭಾರತವನ್ನು ಮಂದಿರದ ಹೆಸರಿನಲ್ಲಿ ಸಂಪೂರ್ಣ ಗಬ್ಬೆದ್ದು ನಾರುವಂತೆ ಮಾಡಿದರು. ನೀವು ಲೋಕ ತ್ಯಜಿಸಿ ನಲ್ವತ್ತರ ದಶಕವಾಗುತ್ತಲೇ ಇತಿಹಾಸದಲ್ಲಿ ದಾಖಲಾಗಿದ್ದ ಮಸೀದಿಯನ್ನು ಯಾರಿಗೂ ಬೇಡದ ನಿಮ್ಮಂಥ ನಿಜವಾದ ರಾಮಭಕ್ತರೂ ಬಯಸದೇ ರಾಮನ ಹೆಸರಲ್ಲಿ ಹೊಡೆದು ಹಾಕಿದರು. ಜೀವನದುದ್ದಕ್ಕೂ ಸದಾ ರಾಮನಾಮ ಜಪಿಸಿದ ನಿಮ್ಮನ್ನೇ ಅವರು ಉಳಿಸಲಿಲ್ಲ. ಆದುದರಿಂದ ನೀವು ಕೊಟ್ಟ ಭಾರತದಲ್ಲಿ ನಿಮ್ಮ ಹಂತಕರ ಸಂತತಿಯಿಂದ ನಾವು ಅದನ್ನು ನಿರೀಕ್ಷೆ ಮಾಡುವಂತೆಯೂ ಇಲ್ಲ ಬಿಡಿ.
ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿದ್ದ ನೀವು, ಸ್ವಾತಂತ್ರ್ಯ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿರಿ. ನಿಜವಾಗಿ ನಿಮ್ಮ ಪ್ರಕಾರ ರಾಮರಾಜ್ಯ ಎಂದರೆ ಹಿಂದೂರಾಜ್ಯವಾಗಿರದೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜವಾಗಿತ್ತು.
ಇಲ್ಲಿ ರಾಜ ಮತ್ತು ಪ್ರಜೆಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ, ಒಬ್ಬ ಸಾಮಾನ್ಯ ನಾಗರಿಕನು ತನಗೆ ಸಿಗಬೇಕಾದ ನ್ಯಾಯವನ್ನು ತ್ವರಿತವಾಗಿ ದೊರಕಿಸಿಕೊಳ್ಳಬಹುದು. ಆದರೆ ನಮಗೆ ದೊರಕಿದ್ದೇನು? ನಿಮಗೆ ತಿಳಿದಿಲ್ಲ ಅದೆಲ್ಲಾ ಬುಡಮೇಲಾಗಿದೆ.
ಅತೀ ಮುಖ್ಯವಾಗಿ ನೀವು ಪ್ರತಿ ಹಳ್ಳಿಗಳು ಸ್ವಾವಲಂಬಿಗಳಾಗಬೇಕೆಂದು ಭಾರತದ ಭವಿಷ್ಯವು ಹಳ್ಳಿಗಳಲ್ಲಿ ಅಡಗಿದೆ ಎಂದು ನಂಬಿದಿರಿ. ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ತಳಮಟ್ಟದಲ್ಲಿ ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸಾಧನವಾಗಿ ನೀವು ಹಳ್ಳಿಯನ್ನೇ ಆರಿಸಿದಿರಿ. ಆದರೆ ಹೊಟ್ಟೆಪಾಡಿಗಾಗಿ ಹಳ್ಳಿಯಬಿಟ್ಟು ನಗರ ಸೇರಿದ ಬಡಜನರು ಎಲ್ಲಿಯೂ ಬೇಡವಾಗಿ ಪುನಃ ಹಳ್ಳಿಗಳಿಗೆ ಮರಳಿ ಅನ್ನ ಸಿಗದೇ ನರಳಿ ಸಾಯುತ್ತಿದ್ದಾರೆ.
ನೀವು ಕೊಟ್ಟ ಭಾರತದ ಭವಿಷ್ಯವನ್ನು ಪರಿಣಾಮಕಾರಿ ಮತ್ತು ಮತ್ತೊಮ್ಮೆ ಅನ್ಯಾಯ ನಡೆಯದಿರುವಂತೆ ವಿಧಿ ಬರೆಯಬೇಕಾಗಿದ್ದ ನ್ಯಾಯವ್ಯವಸ್ಥೆಗಳು ನ್ಯಾಯವನ್ನು ನೀಡುವ ಬದಲು ಯಾರದೋ ಗುಲಾಮರಂತೆ ನಡೆಯುತ್ತಿದ್ದಾರೆ. ಅವರ ಪಾಲಿನ ದೇವರುಗಳಾಗಿ ನಿವೃತ್ತ ಜೀವನದಲ್ಲೂ ಐಷಾರಾಮಿ ಬದುಕು ಕನಸು ಕಂಡು ಉಳ್ಳವರಿಗಾಗಿ ವಿಧಿ ಬರೆದು ನಮ್ಮನ್ನೆಲ್ಲಾ ಅಭದ್ರತೆಗೆ ನೂಕಿ ಹಾಕಿದ್ದಾರೆ.
ನಿಜವಾದ ಸ್ವಾತಂತ್ರ್ಯ ಒಂಟಿ ಹೆಣ್ಣೊಬ್ಬಳು ತಡರಾತ್ರಿ ನಿರ್ಭಯವಾಗಿ ನಡೆದಾಗ ಮಾತ್ರವೆಂದು ನೀವು ಅಂದಿರಿ. ಬಾಪೂಜಿ ನಿಮಗೆ ಗೊತ್ತೇನೂ! ಇಲ್ಲಿ ತಡರಾತ್ರಿ ಹೆಣ್ಣು ನಡೆಯುವುದು ಹಾಗಿರಲಿ. ಅವಳ ಬಾಳನ್ನು ಹಗಲಲ್ಲಿ ಸರ್ವನಾಶ ಮಾಡಿ ತಡರಾತ್ರಿ ಆಡಳಿತವು ಅವಳ ಅಂತ್ಯಕ್ರಿಯೆ ಮಾಡುತ್ತಿದೆ. ಹೆಣ್ಣೊಬ್ಬಳ ಬದುಕು ಈ ಭಾರತದಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ ಅನ್ನುವ ಭಯವೊಂದು ಈಗ ಆವರಿಸಿ ಬಿಟ್ಟಿದೆ.
ಯಾವ ಕನಸನ್ನು ನೀವು ಕಂಡು ಅದಕ್ಕಾಗಿಯೇ ಬಲಿಯಾಗಿದ್ದೀರೋ ಅದು ಎಳ್ಳಷ್ಟೂ ಇಲ್ಲಿ ನನಸಾಗಿಯೇ ಇಲ್ಲ. ರಾಜಕೀಯ ಪಕ್ಷಗಳು ಜನರನ್ನು ಭಾವನಾತ್ಮಕವಾಗಿ ಬಳಸಿ ಬಿಸಾಡುತ್ತವೆ ಹೊರತು ಯಾರಿಗೂ ನೆಮ್ಮದಿಯ ನಾಳೆಗಳನ್ನು ಕೊಡುತ್ತಲೇ ಇಲ್ಲ. ಈಗೀಗ ಅಲ್ಪ ಭರವಸೆಗಳು ಮೆಲ್ಲನೇ ಸಾಯುತ್ತಲೂ ಇದೆ.
ನಿಮ್ಮ ಮೌಲ್ಯಗಳು ಪಾಠಪುಸ್ತಕಗಳಲ್ಲಿ ಭದ್ರವಾಗಿದೆ. ಮಕ್ಕಳು ಅದನ್ನು ಕಲಿಯುತ್ತಲೇ ಬೆಳೆಯುತ್ತಿದ್ದಾರೆ. ಆದರೆ ಬೆಳೆಯುತ್ತಲೇ ನಿಮ್ಮ ಹಂತಕರ ಆಲೋಚನೆಗಳೇ ಅವರಲ್ಲೆಲ್ಲಾ ತುಂಬುವ ಕೆಲಸವೂ ನಿಮ್ಮ ಮೌಲ್ಯಗಳಿಗಿಂತ ವೇಗದಲ್ಲಿ ನಡೆಯುತ್ತಿದೆ. ಎಲ್ಲವೂ ಕೈಮೀರಿದಂತಿದೆ. ಒಂದೋ ನೀವು ಹುಟ್ಟಬೇಕು. ಇಲ್ಲದಿದ್ದರೆ ನಿಮ್ಮ ಮೌಲ್ಯಗಳು ಹುಟ್ಟಬೇಕು. ಅಲ್ಲಿಯತನಕ ಅಕ್ಟೋಬರ್ ಎರಡು ಬರುವ ದಿನ ಮಾತ್ರ ನಿಮ್ಮ ನೆನಪು.