ಸಕಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು IIಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ II 🖋️ನವಾಝ್ ತುಂಬೆ
ಪ್ರತಿ ವರ್ಷವೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.ಹಳೆಯ ಹೆಸರಾಗಿದ್ದ ಮೈಸೂರು ಈಗಿನ ಕರ್ನಾಟಕ ಎಂದು 1956ನೇ ನವೆಂಬರ್ 1ರಂದು ಮರುನಾಮಕರಣ ಹಾಗೂ ನಿರ್ಮಾಣಗೊಳಿಸಿದ ಸಂಕೇತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಆಗಿನ ಹರಿದು ಹಂಚಿಹೋಗಿದ್ದ ಮೈಸೂರಿನ ಕನ್ನಡ ಭಾಷೆ ಮಾತನಾಡುವ ಪ್ರದೇಶವನ್ನು ಏಕೀಕರಣಗೊಳಿಸಿ ಕರ್ನಾಟಕ ರಾಜ್ಯ ಘೋಷಣೆ ಮಾಡಿದ ದಿನದ ವಿಶೇಷತೆ ರಾಜ್ಯೋತ್ಸವದ ದಿನಾಚರಣೆಯೂ ಆಗಿರುತ್ತದೆ.
ಈ ದಿನ ಕರ್ನಾಟಕ ರಾಜ್ಯದಲ್ಲಿ ರಜಾದಿನವಾಗಿಯೂ,ಜಾತಿ ಮತ ಧರ್ಮಗಳ ಭೇದವಿಲ್ಲದೆ ನಾಡಹಬ್ಬವಾಗಿಯೂ ಆಚರಿಸಲಾಗುತ್ತದೆ. ಹಳದಿ(ಶಾಂತಿ)ಮತ್ತು ಕೆಂಪು(ಕ್ರಾಂತಿ)ಯ ಸಂಕೇತವಾದ ಕನ್ನಡದ ದ್ವಜದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತದೆ.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.ಇದು ರಾಜ್ಯ,ದೇಶ ಹಾಗು ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಕನ್ನಡಿಗರ ರಾಜ್ಯೋತ್ಸವ ಕೂಡ ಆಗಿರುತ್ತದೆ.ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯ, ಯು.ಎ.ಇ, ಬಹ್ರೈನ್, ಕತಾರ್, ಕುವೈತ್,ಒಮಾನ್,ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್,ಜಪಾನ್,ಸಿಂಗಾಪುರ್, ಐರ್ಲೆಂಡ್ ಹಾಗೂ ಇನ್ನಿತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಘನತೆಯ ದಿವಸವೂ ಆಗಿರುತ್ತದೆ.
ಕರುನಾಡ ಏಕೀಕರಣದ ಹೋರಾಟ:
ಕರುನಾಡ ಏಕೀಕರಣಕ್ಕಾಗಿ ಅನೇಕ ಚಳವಳಿಗಳು ನಡೆದಿದ್ದವು.ಈ ಚಳುವಳಿ ಹಾಗೂ ಹೋರಾಟಗಳಲ್ಲಿ ಬಾಗಿಯಾದ ಕನ್ನಡಿಗ ನಾಯಕರನ್ನು ಸ್ಮರಿಸಲೇಬೇಕಾದ ಅಗತ್ಯವಿದೆ.ಕನ್ನಡದ ಅನೇಕ ಕವಿಗಳು,ಲೇಖಕರು,ವಿಚಾರವಂತರು,ನಟರು ಹಾಗೂ ಇನ್ನೂ ಹಲವಾರು ಕನ್ನಡಿಗರ ಕೊಡುಗೆಯೂ ಇದೆ.ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ ಅವರು ಕರ್ನಾಟಕ ಏಕೀಕರಣ ಚಳುವಳಿಯನ್ನು 1905 ರಲ್ಲೇ ಆರಂಭಿಸಿದ್ದರು. ಕೆ.ಶಿವರಾಮ್ ಕಾರಂತ್, ಕುವೆಂಪು,ಮಾಸ್ತಿ ವೆಂಕಟೇಶ ಅಯ್ಯಂಗಾರ್,ಕೆಂಗಲ್ ಹನುಮಂತಯ್ಯ, ಅನಕೃ,ಎಚ್.ಎಸ್.ದೊರೆಸ್ವಾಮಿ, ಬಿ.ಎಂ.ಶ್ರೀಕಂಠಯ್ಯ, ಡಾ.ರಾಜ್ ಕುಮಾರ್ ಮುಂತಾದವರು ಹಾಗೂ ಲಕ್ಷಾಂತರ ಕನ್ನಡಿಗರ ಹೊರಾಟದ ಫಲವಾಗಿ ಕರ್ನಾಟಕ ಏಕೀಕರಣ ಎಂಬ ರಾಜ್ಯ ಕಟ್ಟಲು ಸಹಕಾರಿಯಾಗಿದೆ.
ಹಿಂದಿ ಹೇರಿಕೆ ಕನ್ನಡಿಗರು ಸಹಿಸುವುದಿಲ್ಲ:
ನಾವು ಹಿಂದಿ ಭಾಷೆಯ ವಿರುದ್ಧವಾಗಿಲ್ಲ,ಆದರೆ ಹಿಂದಿ ಭಾಷೆಯ ಹೇರಿಕೆಯಿಂದ ಪ್ರಾದೇಶಿಕ ಭಾಷೆಗಳಿಗೆ ಹಾನಿಯುಂಟಾಗಲಿದೆ.ಹಿಂದಿ ಭಾಷೆಯ ಬಳಕೆ ತೀವ್ರವಾಗಿದೆ.”ಒಂದು ದೇಶ,ಒಂದು ಭಾಷೆ”ಎಂಬ ಧ್ಯೇಯ ವಾಕ್ಯ ಬಳಸಿ ಸದ್ದಿಲ್ಲದೇ ಹಿಂದಿ ಕನ್ನಡಿಗರ ಮೇಲೆ ಹೇರಲಾಗುತ್ತಿದೆ. “ವೈವಿಧ್ಯತೆಯಲ್ಲಿ ಏಕತೆಯನ್ನು”ಸಾರುವ ಭಾರತ ಮಣ್ಣಲ್ಲಿ ಕೇಂದ್ರ ಸರ್ಕಾರ ದೇಶದ ಎಲ್ಲಾ ಭಾಷೆಗಳನ್ನು ಗೌರವಿಸಲೇಬೇಕಾಗಿದೆ.
ಕರ್ನಾಟಕದಲ್ಲಿ ಕೆಲವೊಂದು ರಸ್ತೆ,ಸೇತುವೆ,ಸಾರ್ವಜನಿಕ ಸ್ಥಳಗಳಿಗೆ ಕನ್ನಡೇತರರ ಹೆಸರನ್ನು ಬಳಸುವುದೇಕೆ?
ಈ ಹಿಂದೆ ಚರಿತ್ರೆಯಲ್ಲಿ ಕನ್ನಡವು ಅನೇಕ ಸವಾಲುಗಳನ್ನು ಎದುರಿಸಿದಂತಹ ಸಂದರ್ಭದಲ್ಲಿ ಆ ಸವಾಲುಗಳನ್ನು ಮೇಲೆತ್ತಿದಂತಹ ಪ್ರಬಲ ವ್ಯಕ್ತಿತ್ವದ ಹೋರಾಟದ ಮನಸ್ಥಿತಿ ಈ ವ್ಯಕ್ತಿತ್ವಗಳ ಹಿಂದೆ ಇದೆ.ಆದರೆ ಇವತ್ತು ಅವರ ಹೆಸರುಗಳನ್ನೇ ಮರೆಮಾಚುವುದರ ಮೂಲಕ ಕನ್ನಡದ ಚರಿತ್ರೆಯನ್ನೇ ಇಲ್ಲವಾಗಿಸುವ ಹಾಗೂ ಆ ಮೂಲಕ ಮುಂದಿನ ಪೀಳಿಗೆಗೆ ಅವರ ಚರಿತ್ರೆಗಳು ಉಪಲಬ್ಧವಾಗದ ರೀತಿಯಲ್ಲಿ ಕನ್ನಡವನ್ನು ಗುಲಾಮತನಕ್ಕೆ ತಳ್ಳುವಂತಹ ಒಂದು ವ್ಯವಸ್ಥಿತ ಹುನ್ನಾರ ಇದೆ ಎನ್ನುವುದನ್ನು ಪ್ರಜ್ಞಾವಂತರಾದ ಕನ್ನಡಿಗರು ಅರಿಯಬೇಕಾಗಿದೆ.
ಕನ್ನಡದ ಇತಿಹಾಸ ಮತ್ತು ಪರಂಪರೆ ಉಳಿಯಬೇಕಾದರೆ ಕನ್ನಡ ಮಣ್ಣಿನ ಅನೇಕ ಕವಿಗಳ,ಸಾಹಿತಿಗಳ,ರಾಜ ಮಹಾರಾಜರುಗಳ,ಸ್ವಾತಂತ್ರ್ಯ ಹೋರಾಟಗಾರರ,ಕ್ರಿಡಾ ಪಟುಗಳ,ಸಾಮಾಜಿಕ ಧುರೀಣರ ಮುಂತಾದವರುಗಳ ಹೆಸರನ್ನೇ ನಾಮಕರಣಗೊಳಿಸಬೇಕಾಗಿದೆ.
ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ,ಅಂಚೆ ಕಚೇರಿ, ಬ್ಯಾಂಕ್ ಇತ್ಯಾದಿಗಳಂತಹ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಹಿಂದಿಯು ವ್ಯಾಪಕವಾಗಿದೆ.ಕನ್ನಡಿಗರ ಐಕ್ಯತೆಗಾಗಿ ಕನ್ನಡ ಭಾಷೆಯಲ್ಲಿ ಇನ್ನಷ್ಟು ಮುಂದೆ ಸಾಗಬೇಕಾಗಿದೆ.ಕನ್ನಡ ಸಾಹಿತ್ಯ, ಕವನ, ಲೇಖನ, ಸಿನಿಮಾ,ನಾಟಕ,ಹಾಡುಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚು ಪಾಲ್ಗೊಳ್ಳುವ ಕಾರ್ಯ ನಡೆಯಬೇಕಾಗಿದೆ.ಉತ್ತರ ಭಾರತದ ಹಿಂದಿ ಹೇರಿಕೆಯ ವಿರುದ್ಧ ದ್ವನಿ ಎತ್ತಲೇಬೇಕಾಗಿದೆ.
ಕನ್ನಡಿಗರ ಐಕ್ಯತೆ ಮತ್ತಷ್ಟು ಗಟ್ಟಿಗೊಳ್ಳಲಿ:
ಕರ್ನಾಟಕದ ಸಾಮರಸ್ಯ, ಸೌಹಾರ್ದತೆಗಾಗಿ ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ,ಪ್ರತಿ ಕನ್ನಡಿಗರ ನಾಗರಿಕ ಹಕ್ಕು ಮತ್ತು ಸಂರಕ್ಷಣೆಗಾಗಿ ದುಡಿಯುವುದು.ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಕರ್ನಾಟಕದ ಏಕೀಕರಣದ ಕನಸನ್ನು ಮತ್ತಷ್ಟು ಸಾಕಾರಗೊಳಿಸುವುದು ಸರ್ಕಾರದ, ಜನಪ್ರತಿನಿಧಿಗಳ, ಪೋಲಿಸರ ಹಾಗೂ ಸಮಸ್ತ ಕನ್ನಡಿಗರ ಆದ್ಯ ಕರ್ತವ್ಯ ಎಂದು ಮತ್ತೊಮ್ಮೆ ನೆನಪಿಸುತ್ತಾ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿ ಸಡಗರಗೊಳಿಸೋಣ.