✒️ ರಫೀಕ್ ಮಾಸ್ಟರ್
ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮಿತ್ರರೊಬ್ಬರು ಕರೆ ಮಾಡಿದ್ದರು. ನಮ್ಮಲ್ಲಿ ನಿಮ್ಮವರ ಮಕ್ಕಳೇ ಜಾಸ್ತಿ ಇರೋದು. ತರಗತಿಯಲ್ಲಿ ಹೇಳಿದಾಗೆ ಕೇಳೋದಿಲ್ಲ. ನಿಯಂತ್ರಿಸಲಾಗದಷ್ಟು ತೊಂದರೆ ಕೊಡುತ್ತಿದ್ದಾರೆ. ಶಿಕ್ಷಕರನ್ನು ಕ್ಯಾರೇ ಮಾಡುವುದಿಲ್ಲ.
ನಾವು ಹೆತ್ತವರನ್ನು ಕರೆದು ಮಾತನಾಡಿದರೆ ನಮ್ಮ ಮಕ್ಕಳು ಆ ರೀತಿ ಮಾಡುವವರೇ ಅಲ್ಲ ಎಂದು ವಾದಿಸುತ್ತಾರೆ. ಅವರ ಮಕ್ಕಳ ತಪ್ಪನ್ನು ಒಪ್ಪಲು ಸಿದ್ಧರಿಲ್ಲ. ಏನು ಮಾಡೋದು ಸರ್.
ನಾನೊಂದು ಅವರಿಗೆ ಸಲಹೆ ಕೊಟ್ಟೆ. ತರಗತಿಯಲ್ಲಿ ಸಿಸಿಟಿವಿ ಇದೆಯಲ್ಲ. ಎಲ್ಲವನ್ನೂ ರೆಕಾರ್ಡ್ ಮಾಡಿಸಿ. ಹೆತ್ತವರನ್ನು ಕರೆದು ತೋರಿಸಿ.
ಅದರಂತೆ ಒಂದು ದಿನ ಹೆತ್ತವರನ್ನು ಕರೆದರು. ನಾವೂ ಹೋಗಿದ್ದೆವು. ದೊಡ್ಡ ಟಿವಿ ಪರದೆಯ ಮುಂದೆ ಮಕ್ಕಳ ಪೋಕರಿಗಳನ್ನು ತೋರಿಸಲಾಯಿತು. ಆಗ ಹೆತ್ತವರಿಗೆ ಬೇರೆ ದಾರಿಯೇ ಇರಲಿಲ್ಲ. ತಮ್ಮ ಮಕ್ಕಳ ತಪ್ಪನ್ನು ಒಪ್ಪಲೇಬೇಕಾಯಿತು.
ಬಹುಶಃ ಮನುಷ್ಯರ ಈ ಮನೋಭಾವವನ್ನು ಅರಿತುಕೊಂಡೇ ಅಲ್ಲಾಹನು ಪ್ರತಿಯೊಬ್ಬನ ಕರ್ಮಗಳನ್ನು ಬರೆಯಲು ಮಲಕ್ ಗಳನ್ನು ನಿಯೋಜಿಸಿದ್ದಾನೆ. ನಾಳೆ ಪರಲೋಕದಲ್ಲಿ ಮನುಷ್ಯ ತನ್ನ ತಪ್ಪುಗಳನ್ನು ಅಲ್ಲಗಳೆದಾಗ ಇಲ್ಲಿ ಕಂಪ್ಯೂಟರ್ ಪರದೆಯ ಮುಂದೆ ತೋರಿಸಿದಂತೆ ನಾಳೆ ಅಲ್ಲಾಹನು ತೋರಿಸಲಿದ್ದಾನೆ.
ಅಲ್ಪಜ್ಞಾನಿಯಾದ ಮನುಷ್ಯನು ಕಂಡುಹಿಡಿದ ಕ್ಯಾಮರಾದ ಮೂಲಕ ಜಗತ್ತಿನ ಯಾವುದೋ ಮೂಲೆಯಲ್ಲಿ ಆಗುತ್ತಿರುವ ಘಟನೆಗಳು ನಮ್ಮ ಮೊಬೈಲ್ ಪರದೆಯ ಮುಂದೆ ನೋಡಲು ಸಾಧ್ಯವಾದರೆ, ಮಹಾಜ್ಞಾನಿಯಾದ ಅಲ್ಲಾಹನಿಗೆ ನಮ್ಮ ಕರ್ಮಗಳನ್ನು ನಾಳೆ ಪರಲೋಕದಲ್ಲಿ ಇದೇ ರೀತಿ ತೋರಿಸಲು ಸಾಧ್ಯ ಅಲ್ಲವೇ? ಜಸ್ಟ್ ಒಂದು ಸಲ ನಿಮ್ಮ ಮೊಬೈಲನ್ನು ಕೈಯಲ್ಲಿ ಹಿಡಿದುಕೊಂಡು ಯೋಚಿಸಿ!
ಸಾವಿರದ ನಾನೂರು ವರ್ಷಗಳ ಹಿಂದೆ ಕ್ಯಾಮರಾ, ಮೊಬೈಲ್ ಇರಲಿಲ್ಲ. ಯಾವುದೇ ಆಧುನಿಕ ತಂತ್ರಜ್ಞಾನ ಇರಲಿಲ್ಲ. ಆದರೆ ಅಂದಿನ ಸಹಾಬಗಳಿಗೆ ಅಲ್ಲಾಹನ ನೋಟದ ಮೇಲೆ ವಿಶ್ವಾಸವಿತ್ತು. ಪವಿತ್ರ ಕುರ್ ಆನ್, ಪ್ರವಾದಿ ವಚನಗಳ ಮೇಲೆ ಅಚಲವಾದ ನಂಬಿಕೆಯಿತ್ತು. ಎಲ್ಲವನ್ನು ಅಲ್ಲಾಹನು ನೋಡುತ್ತಾನೆ, ಮಲಕುಗಳು ದಾಖಲಿಸುತ್ತಾರೆ ಎನ್ನುವ ತಖ್ವಾ ಮತ್ತು ಇಖ್ಲಾಸ್ ನೊಂದಿಗೆ ಬದುಕಿದರು.
ಕ್ಯಾಮರಾ ಕಣ್ಣಿನ ಭಯಕ್ಕಿಂತಲೂ ಅಲ್ಲಾಹನ ನೋಟದ ಭಯ ನಮಗಿರಲಿ. ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಅಲ್ಲಾಹನು ನೋಡುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಕಲಿಸಿದರೆ ನಮ್ಮ ಮಕ್ಕಳಿಗೆ ಕ್ಯಾಮರಾ ಕಣ್ಣಿನ ಅಗತ್ಯವೇ ಇರಲ್ಲ.
ಸರ್ವಶಕ್ತನಾದ ಅಲ್ಲಾಹನು ನಮ್ಮನ್ನು ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಸಲಿ. ಆಮೀನ್.