Home ಅಂಕಣಗಳು ಕೊರೋನಾ!! ನೀ ಎಷ್ಟೇ ಕಷ್ಟ ಕೊಟ್ಟರೂ ಸರಳ ಮದುವೆಯನ್ನು ಮಾತ್ರ ಕಲಿಸಿಕೊಟ್ಟೆ.

ಕೊರೋನಾ!! ನೀ ಎಷ್ಟೇ ಕಷ್ಟ ಕೊಟ್ಟರೂ ಸರಳ ಮದುವೆಯನ್ನು ಮಾತ್ರ ಕಲಿಸಿಕೊಟ್ಟೆ.

✒️ ರಫೀಕ್ ಮಾಸ್ಟರ್

ಕೊರೋನಾ ಬಹಳಷ್ಟು ಸಾವುನೋವುಗಳನ್ನು ಉಂಟುಮಾಡಿದೆ. ಜನಸಾಮಾನ್ಯರ ಬದುಕು ತತ್ತರಿಸಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಬಲು ದೊಡ್ಡ ಹೊಡೆತವನ್ನು ನೀಡಿದೆ. ಆದರೆ ಕೊರೋನಾ ಸರಳ ಮದುವೆಯನ್ನು ಪ್ರಾಯೋಗಿಕವಾಗಿ ಕಲಿಸಿಕೊಟ್ಟಿದೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

ನಿನ್ನೆ ನನ್ನ ಹತ್ತಿರದ ಸಂಬಂಧಿ ಹುಡುಗನ ಮದುವೆಯಾಯಿತು. ವರ ಮತ್ತು ವಧುವಿನ ಕಡೆಯಿಂದ ಮದುವೆಗೆ ಸೇರಲು ಕೇವಲ 25 ಮಂದಿಗೆ ಮಾತ್ರ ಪಾಸ್. ನಾನೂ ಭಾಗವಹಿಸಿಲ್ಲ. ಕೆಲವೇ ಕೆಲವು ಮಂದಿ ಸಾಕ್ಷಿಗಳಾಗಿ ಮದುವೆ ಕಾರ್ಯ ಹುಡುಗಿ ಮನೆಯಲ್ಲಿ ಸಾಂಗವಾಗಿ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಹುಡುಗಿ ಹುಡುಗನ ಮನೆಯಲ್ಲಿ. ಮದುವೆಗೆ ಮುಂಚಿತವಾಗಿ ಮತ್ತು ಮದುವೆಯ ನಂತರ ಯಾವುದೇ ಕಾರ್ಯಕ್ರಮಗಳು ಇಲ್ಲ. ಎಲ್ಲವೂ ಸರಳ. ಕುಟುಂಬಸ್ಥರೆಲ್ಲ ಮದುವೆಯ ಲೈವ್ ನೋಡಿ ನೂತನ ವಧು ವರರಿಗೆ ಶುಭ ಹಾರೈಸಿ ಪ್ರಾರ್ಥಿಸಿದರು. ಎಲ್ಲರೂ ಖುಷಿಯಲ್ಲಿದ್ದಾರೆ.

ಈ ಮದುವೆಯಲ್ಲಿ ಆಡಂಬರವಿಲ್ಲ.
ಅನಾವಶ್ಯಕ ಖರ್ಚು ಇಲ್ಲ.
ಟ್ರಾಫಿಕ್ ಜಾಮಾಗಿ ಸಾರ್ವಜನಕರಿಗೆ ತೊಂದರೆಯೂ ಇಲ್ಲ.
ಆಹಾರ ವೇಸ್ಟ್ ಆಗಲಿಲ್ಲ.
ಮದುವೆಗೆ ಕರೆಯಲು ಯಾರನ್ನಾದ್ರೂ ಬಿಟ್ಟಿದ್ದೇವೋ ಎಂಬ ಟೆನ್ಷನ್ ಇಲ್ಲ.
ಹೆಣ್ಣು ಹೆತ್ತವರಿಗೆ ಯಾವುದೇ ಒತ್ತಡವಿಲ್ಲ.
ಸಾಲ ಮಾಡುವ ಅಗತ್ಯವಿಲ್ಲ.
ತಾಳ ಮೇಳ ಯಾವುದೂ ಇಲ್ಲ.
ಮದುಮಗ ಮದುಮಗಳು ಇಬ್ಬರೂ ಒಂದಾಗಿ ಖುಷಿಯಲ್ಲಿದ್ದಾರೆ.

ಇಸ್ಲಾಮಿನಲ್ಲಿ ಮದುವೆಯೆಂಬುದು ಅತ್ಯಂತ ಸರಳವಾದ ಕಾರ್ಯ. ಮದುವೆಗೆ ಮುಂಚಿತವಾಗಿ ಮತ್ತು ಮದುವೆಯ ನಂತರ ಅನೇಕ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಅನಗತ್ಯವಾಗಿ ಅದನ್ನು ಬಹಳ ಕಷ್ಟಕರವಾಗಿ ಮಾಡಿದ್ದೇವೆ.

ಸ್ವದೇಶದಲ್ಲಿ ಅಥವಾ ವಿದೇಶದಲ್ಲಿ ದುಡಿಯುವ ನಮ್ಮ ಕೆಲವು ಸಹೋದರರಲ್ಲಿ ಕೇಳಿದರೆ ಅವರ ಬದುಕಿನ ಬಲು ದೊಡ್ಡ ಕಾರ್ಯ ಯುವಕರಾಗಿದ್ದಾಗ ತಂಗಿಯಂದಿರಿಗೆ ಮದುವೆ, ನಂತರ ತನ್ನ ಮದುವೆ, ಆನಂತರ ತನ್ನ ಸ್ವಂತ ಮಕ್ಕಳ ಮದುವೆ ಮಾಡಿಸುವುದು. ಇದರಲ್ಲೇ ಅವರ ಬದುಕು ಸವೆದು ಹೋಗುತ್ತದೆ. ಅದಕ್ಕಾಗಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಸಾಲಗಾರರಾಗುತ್ತಾರೆ. ಇದ್ದ ಆಸ್ತಿ ಮನೆಯನ್ನು ಮಾರಾಟ ಮಾಡುತ್ತಾರೆ.

ಮದುವೆ ಸರಳವಾದರೆ ಆಗಬಹುದಾದ ಪ್ರಯೋಜನಗಳು

👉🏾 ಮುಖ್ಯವಾಗಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಬಹುದು.

👉🏾 ನಮ್ಮ ಆದ್ಯತೆ ಬದಲಾಗುತ್ತದೆ. ನಾವು ಶಿಕ್ಷಣ, ಉದ್ಯೋಗ, ಆರೋಗ್ಯ, ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತೇವೆ.

👉🏾 ಮದುವೆಗೆ ಮಾಡುವ ಖರ್ಚನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಖರ್ಚು ಮಾಡಿ ಉಜ್ವಲ ಭವಿಷ್ಯ ನೀಡಬಹುದು.

👉🏾 ಸ್ವಂತ ಮನೆ ಕಟ್ಟಿ ಬಾಡಿಗೆಯಿಂದ ಮುಕ್ತರಾಗಬಹುದು.

👉🏾 ಶಾಶ್ವತ ಆದಾಯಕ್ಕೊಂದು ಮಾರ್ಗ ಮಾಡಬಹುದು. ಉದಾ: ಬಾಡಿಗೆ ಮನೆ, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವುದು.

👉🏾 ಸ್ವಂತ ಉದ್ದಿಮೆಯನ್ನು ತೆರೆದು ಆರ್ಥಿಕವಾಗಿ ಸಬಲರಾಗಬಹುದು ಮತ್ತು ಅನೇಕ ಮಂದಿಗೆ ಉದ್ಯೋಗ ಕೊಡಬಹುದು.

👉🏾ಫೈನಾನ್ಸ್, ಸಾಲ, ಬಡ್ಡಿಯಿಂದ ಮುಕ್ತರಾಗಬಹುದು. ಮಾನಸಿಕ ಶಾಂತಿಯನ್ನು ಪಡೆಬಹುದು.

👉🏾 ಯಾರ ಮುಂದೆ ಕೈಚಾಚದೆ ಸ್ವಾಭಿಮಾನದಿಂದ ಬದುಕಬಹುದು.

👉🏾 ಬಡವರು ಶ್ರೀಮಂತರನ್ನು ಅನುಸರಿಸುವುದರಿಂದ ಅವರಿಗೂ ಮಾದರಿಯಾಗಬಹುದು. ನಮ್ಮ ನಡೆ ಯಾರಿಗಾದರೂ ಮಾದರಿಯಾದರೆ ನಮಗೂ ಪ್ರತಿಫಲ ಸಿಗುವುದು.

👉🏾 ಶಿಕ್ಷಣ, ಆರೋಗ್ಯ, ಉದ್ಯಮ, ಉದ್ಯೋಗ, ಸಂಶೋಧನೆ, ಸರಕಾರಿ ಸೇವೆಗಳಿಗೆ ಆದ್ಯತೆ ನೀಡುವುದರಿಂದ ನಾವು ರಾಷ್ಟ್ರೀಯ ಮುಖ್ಯವಾಹಿನಿಗೆ ಬರಬಹುದು. ತಲೆಯೆತ್ತಿ ನಡೆಯಬಹುದು.

👉🏾 ಚಿನ್ನ ಬಟ್ಟೆ ಆಡಂಬರದ ಬಗ್ಗೆ ಸ್ಪರ್ಧೆ ನಿಲ್ಲಬಹುದು.

👉🏾 ಬಡ ಹೆಣ್ಣು ಹೆತ್ತವರ ಕಣ್ಣೀರು ನಿಲ್ಲಬಹುದು. ಸಮಯಕ್ಕೆ ಸರಿಯಾಗಿ ಮದುವೆಯಾಗಬಹುದು.

👉🏾 ಅದೆಷ್ಟೋ ಮಂದಿಯ ಅದೆಷ್ಟೋ ದಿನಗಳ ಮಾನವ ಸಂಪನ್ಮೂಲ ರಚನಾತ್ಮಕ ಕಾರ್ಯಗಳಿಗೆ ಬಳಕೆಯಾಗಬಹುದು.

ಜಗತ್ತಿನಿಂದ ಕೊರೊನಾ ಅಳಿಯಲಿ. ಎಲ್ಲರಿಗೂ ಆರೋಗ್ಯ ಸಿಗಲಿ. ಆದರೆ ಕೊರೊನಾ ಕಲಿಸಿದ ಸರಳ ಮಾದರಿ ಮದುವೆ ಮುಂದುವರಿಯಲಿ ಎನ್ನುವುದೇ ಬಡ ಹೆಣ್ಣು ಮಕ್ಕಳ ಮತ್ತು ಅವರ ಹೆತ್ತವರ ಪ್ರಾರ್ಥನೆ.

ಬದಲಾಗಲಿ ನಮ್ಮ ಫೋಕಸ್

ಮದುವೆ ಸರಳವಾಗಲಿ
ಸಾಧನೆ ಶ್ರೀಮಂತವಾಗಲಿ

Previous articleಅಲ್ಲಾಹನ ನೋಟದ ಭಯವಿದ್ದರೆ? ಕ್ಯಾಮೆರಾ ಕಣ್ಣಿನ ಭಯವೇತಕೆ?
Next articleಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ವತಿಯಿಂದ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ.

LEAVE A REPLY

Please enter your comment!
Please enter your name here