Home ಅಂಕಣಗಳು ನನ್ನ ಸಮಸ್ತ ನನ್ನ ಅಭಿಮಾನ……

ನನ್ನ ಸಮಸ್ತ ನನ್ನ ಅಭಿಮಾನ……

✍️ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು

ಹೌದು. ಪರಿಶುಧ್ಧ ಇಸ್ಲಾಮಿನ ಪವಿತ್ರ ಹಾದಿಯನ್ನು ಪುಣ್ಯ ಸಮಸ್ತ ಈ ಆಧುನಿಕ ಯುಗದಲ್ಲಿ ಅದೇ ಪರಿಶುಧ್ಧತೆಯೊಂದಿಗೆ ಮುನ್ನಡೆಸಿಕೊಂಡು ಹೋಗುತ್ತಿದೆ. ಭಾರತೀಯ ಮುಸ್ಲಿಮರಲ್ಲಿ ಅದರಲ್ಲೂ ದಕ್ಷಿಣ ಭಾರತದ ಅಸಂಖ್ಯಾತ ಮುಸ್ಲಿಮರಲ್ಲಿ ಬಿಟ್ಟಿರಲಾಗದ ಸಂಘಟನೆಯಾಗಿ ರೂಪುಗೊಂಡಿದೆ. ಪವಿತ್ರವಾದ, ಕಳಂಕರಹಿತ, ಸಂಶಯರಾಹಿತ್ಯ ಸರ್ವರೀತಿಯಲ್ಲೂ ಸಮಾನ ನ್ಯಾಯ ಹೊಂದಿರುವ ಇಸ್ಲಾಮಿನ ಸಿಧ್ಧಾಂತವನ್ನು ನೂತನವಾದಿಗಳು ಲೌಕಿಕ ಆಲೋಚನೆಯಿಂದ ಅದರಲ್ಲೂ ಪಾಶ್ಚಿಮಾತ್ಯ ಅನಿಸ್ಲಾಮಿಕ್ ಸಿಧ್ಧಾಂತವನ್ನು ತೂರಿಸಿ ಅಲ್ಲೋಲಕಲ್ಲೋಲ ಮಾಡಿ ಹಿಂಡುವ ಕಾರ್ಯವನ್ನು ಮಾಡತೊಡಗಿದರು. ಮುಗ್ಧ ಜನರಲ್ಲಿ ಇಸ್ಲಾಮಿನ ಅಡಿಪಾಯ ತತ್ವಗಳನ್ನೇ ಅಲುಗಾಡಿಸುವಂತಿದ್ದ ಇವರ ವಾಕ್ಚಾತುರ್ಯ ತಲೆಬುಡವಿಲ್ಲದ ಮಾರ್ಗದರ್ಶನ ಭಾರೀ ಅನಾಹುತವೊಂದನ್ನು ತಂದೊಡ್ಡುವ ಆಪಾಯವನ್ನು ಅರಿತ ವರಕ್ಕಲ್ ಮುಲ್ಲಕೋಯ ತಂಙಳ್ ತನ್ನ ದೂರದೃಷ್ಟಿಯಿಂದ ಸಮಸ್ತ ಎಂಬ ಜಗದ್ವಿಖ್ಯಾತ ಮಹಾ ಧಾರ್ಮಿಕ ಸಂಘಟನೆಯೊಂದನ್ನು ಹುಟ್ಟುಹಾಕಿದರು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಆ ಬಳಿಕ ನಡೆದದ್ದು ಇತಿಹಾಸ. ವಿಷಬೀಜವನ್ನು ಧಾರ್ಮಿಕತೆಯ ಎಲ್ಲೆಯೊಳಗೆ ರಾಶಿ ಹಾಕುವ ದುರುದ್ದೇಶವನ್ನು ಹೊಂದಿದ್ದ ನೂತನವಾದಿಗಳಿಗೆ ಸಮಸ್ತ ಅತಿದೊಡ್ಡ ತಡೆಯಾಗಿ ಪರಿಣಮಿಸಿತು. ಆಧುನಿಕತೆಗೆ ಪ್ರವೇಶಿಸಿದ ಭಾರತೀಯ ಮುಸ್ಲಿಮರು ಧಾರ್ಮಿಕವಾಗಿ ಅದೇ ಶುಧ್ಧತೆಯನ್ನು ಪಡೆಯಲು ಸಮಸ್ತ ಇನ್ನಿಲ್ಲದಂತೆ ಪ್ರಯತ್ನಿಸಿತು. ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿತವಾದ ಈ ಸಂಘಟನೆ ಬಳಿಕ ಸಂದರ್ಭೋಚಿತವಾಗಿ ಸಮುದಾಯದ ನಡುವೆ ಬೇರೂರಿದ್ದ ಹಲವು ಸಮಸ್ಯೆಗಳನ್ನೂ ಸಹ ಬೇರ್ಪಡಿಸುವ ಕಾರ್ಯವನ್ನು ಮಾಡುತ್ತಲೇ ಬಂತು. ಇದರ ಚುಕ್ಕಾಣಿಯನ್ನು ಹಿಡಿದ ಕಣ್ಣಿಯತ್ ಉಸ್ತಾದ್ (ಖ.ಸಿ), ಶಂಸುಲ್ ಉಲಮಾ (ಖ.ಸಿ)ರಂಥ ಪ್ರಶ್ನಾತೀತ ನಾಯಕರು ತಮ್ಮನ್ನು ಪೂರ್ಣವಾಗಿ ಅಲ್ಲಾಹನ ಸ್ಮರಣೆಯಲ್ಲೇ ತೊಡಗಿಸಿಕೊಂಡಿದ್ದ ಕಾರಣದಿಂದಲೇ ಸಮಸ್ತ ಇಂದಿಗೂ ಪ್ರಶ್ನಾತೀತವಾಗಿ ಬೆಳೆಯುತ್ತಿದೆ. ಇನ್ನೂ ವ್ಯಕ್ತವಾಗಿ ಹೇಳಬೇಕೆಂದರೆ ದಕ್ಷಿಣ ಭಾರತದ ಇಸ್ಲಾಂನ ನೆರಳು ಸಮಸ್ತವೆಂಬ ಸಂಘಟನೆಯಿಂದಲೇ ವ್ಯಾಪಕಗೊಂಡಿದೆ.


ಆದರೆ ಸಮಸ್ತ ಎಂದಿಗೂ ಧಾರ್ಮಿಕತೆಯನ್ನು ಮಾತ್ರ ಪೋಷಿಸಲಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಮಸ್ತ ನಾಯಕರು ಗಟ್ಟಿಯಾದ ಧ್ವನಿಯಾಗಿದ್ದರು. ಧಾರ್ಮಿಕವಾಗಿ ವಿಶ್ವಾಸದ ಭಾಗವಾಗಿದ್ದ ದೇಶಸ್ನೇಹವನ್ನು ಕೇವಲ ಮನದಲ್ಲಿರಿಸದೆ ಸ್ವತಃ ಹೋರಾಟದಲ್ಲಿ ದುಮುಕಿದ ಚರಿತ್ರೆಯೂ ಸಮಸ್ತಕ್ಕಿದೆ. ಧಾರ್ಮಿಕವಾಗಿ ಅನುಯಾಯಿಗಳಲ್ಲಿ ಕೇವಲ ಧಾರ್ಮಿಕತೆಯನ್ನು ಮಾತ್ರ ಬಿತ್ತದೆ ಸಹಬಾಳ್ವೆ, ವಿಜ್ಞಾನ, ತಂತ್ರಜ್ಞಾನ, ಸಮಾಜಸೇವೆ ಮುಂತಾದ ಸಾಮಾಜಿಕ ಸೇವೆಯಲ್ಲೂ ಸಮಸ್ತ ಮುಂಚೂಣಿಯಲ್ಲಿದೆ.


ಇಸ್ಲಾಮಿಕ್ ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಶಿಕ್ಷಣವನ್ನು ಹಂತ ಹಂತವಾಗಿ ಸಮುದಾಯಕ್ಕೆ ಧಾರೆಯೆರೆಯುತ್ತಲೇ ಬಂದ ಸಮಸ್ತ ಇಂದು ಹತ್ತು ಸಾವಿರಕ್ಕೂ ಮಿಕ್ಕಿದ ಧಾರ್ಮಿಕ ಶಿಕ್ಷಣ ಕೇಂದ್ರವನ್ನು ಹನ್ನೆರಡು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಅಲ್ಲದೇ ಎಸ್‌.ಕೆ.ಎಸ್‌.ಎಸ್‌. ಎಫ್ ಎಂಬ ಯುವಕರ ತಂಡ, ಎಸ್‌.ವೈ.ಎಸ್ ಎಂಬ ವಯಸ್ಕರ ತಂಡ, ವಿಖಾಯ ಎಂಬ ಸರ್ವ ಸನ್ನಧ್ಧ ತಂಡ ಸಹಚಾರಿ ಎಂಬ ಬಡ ನಿರ್ಗತಿಕರ ಸಾಂತ್ವನ ತಂಡ, ಎಸ್‌.ಕೆ.ಎಸ್‌.ಬಿ.ವಿ ಎಂಬ ವಿದ್ಯಾರ್ಥಿಗಳ ತಂಡದಂಥಹ ಸಮಾಜಮುಖಿ ಸಂಘಟನೆಳು ಸಹ ಸಮಸ್ತದ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಾ ಜನಮನ್ನಣೆ ಪಡೆಯುತ್ತಿದೆ. ಸರ್ವ ವಿಧದಲ್ಲೂ ಭಾರತೀಯ ಮುಸ್ಲಿಮರ ಪಾಲಿಗೆ ಅಬೇಧ್ಯ ನೆಲೆಯೊಂದನ್ನು ಸಮಸ್ತ ಕಳೆದ ತೊಂಬತ್ತೈದು ವರ್ಷದಿಂದಲೂ ನೀಡುತ್ತಾ ಬರುತ್ತಿದೆ.


ಮುಖ್ಯವಾಗಿ ಸಮಸ್ತ ಕೈಗೊಳ್ಳುವ ತೀರ್ಮಾನವಾಗಲಿ ಮಂಡಿಸುವ ಅಭಿಪ್ರಾಯವಾಗಲಿ ಇಂದಿನವರೆಗೂ ಇತರ ಪಕ್ಷ ಸಂಘಟನೆಗಳಂತೆ ಗೊಂದಲವಾದ ಚರಿತ್ರೆಯೇ ಇಲ್ಲ. ನೇರವಾಗಿ ನಿಷ್ಠುರವಾಗಿ ತೀರ್ಮಾನವನ್ನು ಕೈಗೊಳ್ಳುವ ಕಲೆಯು ಸಾತ್ವಿಕರಾದ ಸಮಸ್ತ ಪಂಡಿತ ನೇತಾರರಿಗೆ ಅಲ್ಲಾಹನ ಮೂಲಕ ಲಭಿಸಿದ ಕಲೆಯಾಗಿರುವುದು ಅದರ ನೆರಳನ್ನು ಹಿಂಬಾಲಿಸುವ ಕೋಟಿಗಟ್ಟಲೆ ಅನುಯಾಯಿಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತಿದೆ.


ಈ ರೀತಿಯಾದ ಭದ್ರ ನೆಲೆಯೊಂದು ನಮ್ಮ ನಡುವೆ ನಮ್ಮ ಹಿರಿಯರ ಕಾಲದಿಂದಲೂ ಇರುವಾಗ ಪೂರ್ಣ ಸ್ವಾತಂತ್ರ್ಯದೊಂದಿಗೆ ಅದರ ಜೊತೆಗೂಡಿ ನಡೆಯುವ ಉತ್ಸಾಹದ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ಅಲ್ಲಾಹನು ಸಮಸ್ತವನ್ನು ಪುನರುತ್ಥಾನದವರೆಗೂ ನೆಲೆನಿಲ್ಲಿಸಲಿ. ಮತ್ತು ಅದರ ಜೊತೆಗೂಡಿ ಪರಿಪೂರ್ಣ ವಿಶ್ವಾಸಿಯಾಗಿ ನಡೆಯುವ ಸೌಭಾಗ್ಯವನ್ನು ಅಲ್ಲಾಹನು ನೀಡಿ ಅನುಗ್ರಹಿಸಲಿ ಆಮೀನ್….

Previous articleಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ವತಿಯಿಂದ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ.
Next articleಐ. ಎಸ್. ಎಫ್ ಜುಬೈಲ್ ಅಧ್ಯಕ್ಷರಾಗಿ ನಝೀರ್ ತುಂಬೆ ಆಯ್ಕೆ

LEAVE A REPLY

Please enter your comment!
Please enter your name here